

ನವದೆಹಲಿ: ಚುನಾವಣಾ ಆಯೋಗವು ಬಿಹಾರದ ಮತದಾರರಿಗೆ ಇನ್ನೂ ನ್ಯಾಯ ಒದಗಿಸಿಲ್ಲ ಎಂದು ಕಾಂಗ್ರೆಸ್ ನಾಯಕ ಮತ್ತು ಕರ್ನಾಟಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೋಮವಾರ ಆರೋಪಿಸಿದ್ದಾರೆ.
ಚುನಾವಣಾ ಆಯೋಗವು ಬಿಹಾರದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ಬಡ ಮತದಾರರು ಮತ್ತು ಉದ್ಯೋಗಕ್ಕಾಗಿ ರಾಜ್ಯದಿಂದ ಹೊರಗೆ ಹೋಗುತ್ತಿರುವವರ ಹೆಸರನ್ನು ಅಳಿಸಿಹಾಕಿದೆ ಎಂದು ದೂರಿದರು.
ಇಂದು ದೆಹಲಿಯಲ್ಲಿ ಮತಗಳ್ಳತನದ ವಿರುದ್ಧ ಸಹಿ ಸಂಗ್ರಹ ಅಭಿಯಾನದಲ್ಲಿ ಸಂಗ್ರಹಿಸಿದ ರಾಜ್ಯದ 1,12,41,000 ಸಹಿಗಳನ್ನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಡಿಕೆ ಶಿವಕುಮಾರ್ ಅವರು ಹಸ್ತಾಂತರಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಮತಗಳ್ಳತನದ ಬಗ್ಗೆ ಮೊದಲು ಪತ್ತೆ ಹಚ್ಚಿದ್ದೇ ಕರ್ನಾಟಕದಲ್ಲಿ. ಈಗ ಮಹಾರಾಷ್ಟ್ರ, ಹರಿಯಾಣ, ಬಿಹಾರದಲ್ಲಿ ನಡೆಸಿರುವ ಅಕ್ರಮಗಳು ಬೆಳಕಿಗೆ ಬಂದಿವೆ. ಈಗ ಚುನಾವಣಾ ಆಯೋಗ "ಏನೋ ತಪ್ಪು" ನಡೆದಿದೆ ಎಂದು ಒಪ್ಪಿಕೊಂಡ ನಂತರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(SIR) ನಡೆಸುತ್ತಿದೆ ಎಂದರು.
ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಾಂಕೇತಿಕವಾಗಿ ಸಹಿ ಸಂಗ್ರಹ ಅಭಿಯಾನದ ದಾಖಲೆಗಳನ್ನು ಹಸ್ತಾಂತರಿಸಿದ್ದೇವೆ. 100 ವರ್ಷಗಳ ಹಿಂದೆ ಮಹಾತ್ಮ ಗಾಂಧೀಜಿ ಅವರು ನಿಭಾಯಿಸಿದ್ದ ಜವಾಬ್ದಾರಿಯನ್ನು ಈಗ ನಮ್ಮ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಅವರು ನಿಭಾಯಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮತದಾನದ ಹಕ್ಕು ರಕ್ಷಣೆ ಹೋರಾಟ ಮಾಡಿದ್ದೇವೆ. ಒಬ್ಬರಿಗೆ ಒಂದು ಮತ ಎಂದು ನಾವು ಹೋರಾಟ ಮಾಡುತ್ತಿದ್ದೇವೆ. ಮತಗಳ್ಳತನವನ್ನು ಮೊದಲು ಪತ್ತೆಹಚ್ಚಿದ್ದೇ ನಮ್ಮ ರಾಜ್ಯದಲ್ಲಿ. ಎಐಸಿಸಿ ಸಂಶೋಧನಾ ವಿಭಾಗ, ನಮ್ಮ ಅಭ್ಯರ್ಥಿಯಾಗಿದ್ದ ಮನ್ಸೂರ್ ಅಲಿ ಖಾನ್, ಕೆಪಿಸಿಸಿ ತಂಡ ಸೇರಿ ಈ ಮತಗಳ್ಳತನ ಪತ್ತೆ ಮಾಡಿ ಎಐಸಿಸಿಗೆ ಮಾಹಿತಿ ನೀಡಿದೆವು ಎಂದು ವಿವರಿಸಿದರು.
ಮತಗಳ್ಳತನ ಖಂಡಿತವಾಗಿ ಆಗಿದೆ. ಬಿಹಾರದಲ್ಲಿ ಎಸ್‌ಐಆರ್ ನಡೆದಾಗ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಏಕೆ ಸೂಚನೆ ನೀಡಿತು? ರಾಹುಲ್ ಗಾಂಧಿ ಅವರು ಇದರ ಬಗ್ಗೆ ಮೊದಲ ಪತ್ರಿಕಾಗೋಷ್ಠಿ ನಡೆಸಿದ ನಂತರ ಮಾಧ್ಯಮಗಳು ಬೆಂಗಳೂರಿಗೆ ಬಂದು ಉಲ್ಲೇಖಿತ ಮನೆಗಳ ಸಂಖ್ಯೆ ಸೇರಿದಂತೆ ಯಾವ, ಯಾವ ಕಡೆ ಅಕ್ರಮ ನಡೆದಿದೆ ಎಂದು ಫ್ಯಾಕ್ಟ್ ಚೆಕ್ ಮಾಡಿದವು. ಯಾವ ಸರ್ಕಾರವೂ ಅದರ ವೈಫಲ್ಯ ಒಪ್ಪಿಕೊಳ್ಳುವುದಿಲ್ಲ. ಆದರೆ ವಿರೋಧ ಪಕ್ಷದ ಕೆಲಸವೇ ವೈಫಲ್ಯಗಳನ್ನು ಕಂಡುಹಿಡಿದು ತಿಳಿಸುವುದು ಎಂದರು.
ಇದೇ ವೇಳೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯವನ್ನು ಪಕ್ಷದ ಹೈಕಮಾಂಡ್ ಜೊತೆ ಪ್ರಸ್ತಾಪಿಸಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಶಿವಕುಮಾರ್. "ರಾಜಕೀಯ ಬಗ್ಗೆ ಮಾತನಾಡಲು ನಾನು ಇಲ್ಲಿಗೆ ಬಂದಿಲ್ಲ. ಪ್ರಜಾಪ್ರಭುತ್ವವನ್ನು ಉಳಿಸಲು, ಮತಗಳನ್ನು ಉಳಿಸಲು ನಾನು ಇಲ್ಲಿದ್ದೇನೆ. ನಾನು ಯಾವುದೇ ರಾಜಕೀಯ ಉತ್ತರವನ್ನು ನೀಡಲು ಬಯಸುವುದಿಲ್ಲ" ಎಂದು ಹೇಳಿದರು.
Advertisement