

ಮಧುಗಿರಿ: 2004ರಲ್ಲಿ ನಾನು ಜೆಡಿಎಸ್ ನಿಂದ ಶಾಸಕನಾಗಿದ್ದಾಗ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಪೂರ್ಣ ವೈಟ್ ವಾಶ್ ಆಗಿತ್ತು. ಮತ್ತೆ ಅಂತಹ ಸಂದರ್ಭ ಬಂದರೂ ಬರಬಹುದು, ನಾನು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಎಂದ ಮೇಲೆ ಅಂತಹ ಪರಿಸ್ಥಿತಿ ಬರಲಿಕ್ಕಿಲ್ಲ ಎಂದು ಅಂದುಕೊಳ್ಳೋಣ ಎಂದು ಕಾಂಗ್ರೆಸ್ ಶಾಸಕ ಕೆ ಎನ್ ರಾಜಣ್ಣ ನಗುತ್ತಾ ಹೇಳಿದ್ದಾರೆ.
ನಿನ್ನೆ ಅವರು ಮಧುಗಿರಿಯ ದೊಡ್ಡೇರಿಯಲ್ಲಿ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಮುಂದೆ ನಾನು ಬೇರೆ ಪಕ್ಷದ ಬಾವುಟ ಹಿಡಿಯುವ ಪ್ರಸಂಗ ಬರಲೂಬಹುದು. ಕಾದು ನೋಡೋಣ ಎಂದರು.
ರಾಜಣ್ಣ ಹೇಳಿಕೆ ವೈರಲ್
ಕಾಂಗ್ರೆಸ್ ಕಾರ್ಯಕರ್ತರು ಮತ್ತು ನನ್ನ ಅಭಿಮಾನಿಗಳು ಇಂದು ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯಲ್ಲಿ ಯಾರೂ ಕಾಂಗ್ರೆಸ್ ಬಾವುಟ ಹಿಡಿದಿರಲಿಲ್ಲ. ಏಕೆ ಎಂದು ನನಗೂ ಗೊತ್ತಿಲ್ಲ. ಮುಂದೆ ನಾನು ಕೂಡ ಯಾವ ಬಾವುಟ ಹಿಡಿಯುತ್ತೇನೋ ಗೊತ್ತಿಲ್ಲ ಎಂದರು.
ರಾಜಕಾರಣದಲ್ಲಿ ಶಾಶ್ವತ ಶತ್ರು-ಮಿತ್ರುತ್ವ ಇಲ್ಲ
ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಇಲ್ಲ, ಮಿತ್ರರೂ ಇಲ್ಲ. ಜನರ ಬೆಂಬಲವೇ ನನಗೆ ಆನೆ ಬಲ. ಜನರನ್ನು ನಂಬಿ ನಾನು ರಾಜಕಾರಣ ಮಾಡುತ್ತಿದ್ದೇನೆ.ನನಗೂ ಮಧುಗಿರಿಗೂ ಯಾವ ಋಣಾನುಬಂಧವೋ ಗೊತ್ತಿಲ್ಲ. ತುಮಕೂರಿನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಬೇಕು ಎಂದುಗೊಂಡಿದ್ದ ನನಗೆ ಮಧುಗಿರಿ ಕ್ಷೇತ್ರದ ಜನ ರಾಜಕೀಯ ಜನ್ಮ ನೀಡಿದರು ಎಂದರು.
ತಾವು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಹೇಳಿದ್ದರಿಂದ ಹಿಂದೆ ಆದಂಥ ಪರಿಸ್ಥಿತಿ ಮತ್ತೆ ಬರುವುದಿಲ್ಲ. ಆದರೆ ಪರಿಸ್ಥಿತಿ ಏನಾಗುತ್ತದೆ ಎಂದು ಹೇಳಲಾಗದು ಎಂದರು. ಬಡವರ ಪರವಾಗಿ ಕೆಲಸ ಮಾಡಬೇಕು. ಜಾತಿ ರಹಿತವಾಗಿ, ಪಕ್ಷ ರಹಿತವಾಗಿ ಎಲ್ಲ ಬಡವರ ಪರ ಕೆಲಸ ಮಾಡಿದಾಗ ಅವರ ಆಶೀರ್ವಾದವೇ ದೇವರ ಆಶೀರ್ವಾದ ಮತ್ತು ಅವರ ಬೆಂಬಲವೇ ಆನೆ ಬಲ ಎಂದು ತಿಳಿಸಿದರು. ಜನರ ನಂಬಿಕೆ ಮತ್ತು ಆಶೀರ್ವಾದದಿಂದ ಮಾತ್ರ ರಾಜಕಾರಣದಲ್ಲಿ ಬೆಳೆಯಲು ಸಾಧ್ಯ ಎಂದು ಅವರು ಹೇಳಿದರು.
Advertisement