

ಬೆಂಗಳೂರು: ಮುಂದಿನ ವರ್ಷ ತಮ್ಮ ದಾಖಲೆಯ 17ನೇ ಬಜೆಟ್ ಮಂಡಿಸುವುದಾಗಿ ಹೇಳಿದ್ದು, ಅಲ್ಲಿಯವರೆಗೆ ರಾಜ್ಯ ಸರ್ಕಾರದ ನಾಯಕತ್ವದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂಬ ಮಾತನ್ನು ಸೂಚ್ಯವಾಗಿ ಸಿಎಂ ಸಿದ್ದರಾಮಯ್ಯ ನಿನ್ನೆ ಹೇಳಿದ್ದಾರೆ.
ಎಲ್.ಜಿ. ಹಾವನೂರ್ ಅವರ ಮೊದಲ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಸಲ್ಲಿಸುವ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ನಿನ್ನೆ ಮಾತನಾಡಿದ ಸಿಎಂ, ನಾನು ಮೊದಲ ಬಾರಿಗೆ ಹಣಕಾಸು ಸಚಿವನಾದಾಗ, ಈ ಕುರುಬನಿಗೆ ಕುರಿಗಳನ್ನು ಎಣಿಸಲು ಬರಲಿಕ್ಕಿಲ್ಲ, ಇನ್ನು ರಾಜ್ಯ ಬಜೆಟ್ ಎಲ್ಲಿಂದ ಮಂಡಿಸುತ್ತಾನೆ ಎಂದು ನನ್ನನ್ನು ಅಪಹಾಸ್ಯ ಮಾಡಿದರು. ನಾನು ಅದನ್ನು ಸವಾಲಾಗಿ ತೆಗೆದುಕೊಂಡು 16 ಬಜೆಟ್‌ಗಳನ್ನು ಇಲ್ಲಿಯವರೆಗೆ ಮಂಡಿಸಿಕೊಂಡು ಬಂದಿದ್ದೇನೆ ಎಂದರು.
ನಾನು 17ನೇ ಬಜೆಟ್ ನ್ನು ಸಹ ಮಂಡಿಸುತ್ತೇನೆ. ಹಣಕಾಸು ಇಲಾಖೆಯು ಮುಂದಿನ ವರ್ಷ ಮಾರ್ಚ್‌ನಲ್ಲಿ ಮಂಡಿಸಲಾಗುವ 2026-27ರ ಬಜೆಟ್‌ಗೆ ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದೆ ಎಂದರು.
ಗುಲಾಮಗಿರಿ ಸಂಕೇತ
ಕಾರ್ಯಕ್ರಮದಲ್ಲಿ ತಮ್ಮ ಭಾಷಣದ ವೇಳೆ ಸಿದ್ದರಾಮ್ಯನವರು, ಹಿಂದುಳಿದ ವರ್ಗಗಳು ಮತ್ತು ಎಸ್‌ಸಿ/ಎಸ್‌ಟಿ ಸದಸ್ಯರು ಬಿಜೆಪಿ ಮತ್ತು ಆರ್‌ಎಸ್‌ಎಸ್ ಜೊತೆ ಕೈಜೋಡಿಸುವುದನ್ನು ತೀವ್ರವಾಗಿ ಖಂಡಿಸಿದರು.
ಬಿಜೆಪಿ-ಆರ್‌ಎಸ್‌ಎಸ್--ಎಬಿವಿಪಿಗೆ ಸೇರುವ ಹಿಂದುಳಿದವರು ಮತ್ತು ದಲಿತರಿಗೆ ನಾನು ಏನು ಹೇಳಲಿ? ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತವು ಅವರಿಗೆ ವಿರುದ್ಧವಾಗಿದೆ ಎಂದು ತಿಳಿದಿದ್ದರೂ ಅವರು ಹಾಗೆ ಮಾಡುತ್ತಾರೆ. ದೇವರು ಮತ್ತು ಧರ್ಮದ ಹೆಸರಿನಲ್ಲಿ ಸಾಯುತ್ತಿರುವವರು ನಮ್ಮ ಹಿಂದುಳಿದ ವರ್ಗದ ಜನರು ಎಂದರು.
ಇಂದು ಶಿಕ್ಷಣ ಪಡೆಯುವವರ ಮಟ್ಟ ಹೆಚ್ಚುತ್ತಿದ್ದರೂ ಸಹ ಜಾತಿ ವ್ಯವಸ್ಥೆ ಬಲಗೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ಜನರು ತಮ್ಮ ಅಧೀನ ಮನಸ್ಥಿತಿಯಿಂದ ಹೊರಬಂದಿಲ್ಲ. ಮೇಲ್ಜಾತಿಗಳಲ್ಲಿರುವ ಬಡವರನ್ನು ಬಹುವಚನದಲ್ಲಿ ಸಂಬೋಧಿಸಿ, ಕೆಳಜಾತಿಗಳಲ್ಲಿರುವ ಶ್ರೀಮಂತರನ್ನು ಏಕವಚನದಲ್ಲಿ ಸಂಬೋಧಿಸುವುದು ಗುಲಾಮಗಿರಿಯ ಸಂಕೇತವಾಗಿದೆ ಎಂದು ಹೇಳಿದರು.
Advertisement