

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರಾವಧಿಯ ಎರಡೂವರೆ ವರ್ಷಗಳನ್ನು ಕಳೆದಿದ್ದು, ಈ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳು, ಕೆಲಸಗಳಿಂದ ಸುದ್ದಿಯಾಗುವ ಬದಲು ಸಿಎಂ ಅಧಿಕಾರ ಹಸ್ತಾಂತರ, ಬಣ ಬಡಿದಾಟದಲ್ಲಿಯೇ ಮುಳುಗಿ ಹೋಗಿದೆ.
ಅಧಿಕಾರ ಹಂಚಿಕೆ ಕದನ ಇಷ್ಟು ದಿನ ಮುಸುಕಿನ ಗುದ್ದಾಟವಾಗಿದ್ದು ಈಗ ಬಹಿರಂಗವಾಗಿಯೇ ತಾರಕಕ್ಕೇರಿದೆ. ದಿನಕ್ಕೊಂದು ಮಿಂಚಿನ ಬೆಳವಣಿಗೆಗಳು ನಡೆಯುತ್ತಿವೆ. ಸಿದ್ದರಾಮಯ್ಯ ಸಿಎಂ ಆಗಿ ಎರಡೂವರೆ ವರ್ಷ ಮುಗಿಯಿತು. 2023ರಲ್ಲಿ ಹೈಕಮಾಂಡ್ ಕೊಟ್ಟ ಮಾತಿನಂತೆ ಅಧಿಕಾರ ಹಂಚಿಕೆಯಾಗಲೇ ಬೇಕೆಂದು ಡಿಸಿಎಂ ಡಿಕೆ ಶಿವಕುಮಾರ್ ಬಣ ಪಟ್ಟುಹಿಡಿದಿದೆ.
ಇದೀಗ ಶಾಸಕ ಬಲಪ್ರದರ್ಶನವೂ ನಡೆಯುತ್ತಿದೆ. ಡಿಕೆಶಿ ಬೆಂಬಲಿತ ಒಕ್ಕಲಿಗ ಶಾಸಕರು ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ಮುಂದೆ ಬಲಾಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ವರಿಷ್ಠರ ಮುಂದೆ ಪರೇಡ್ ನಡೆಸಿದ್ದಾರೆ. ಇತ್ತ ಸಿಎಂ ಆಪ್ತ ಬಣ ಸತೀಶ್ ಜಾರಕಿಹೊಳಿ ಮನೆಯಲ್ಲಿ ಮೊನ್ನೆ ಗುರುವಾರ ಡಿನ್ನರ್ ಮೀಟಿಂಗ್ ನಡೆಸಿ ತಂತ್ರ ಹೂಡಿತ್ತು. ಕಳೆದೆರಡು ದಿನಗಳಿಂದ ಡಿಕೆಶಿ ನಿವಾಸ ಚಟುವಟಿಕೆಯ ಕೇಂದ್ರವಾಗಿದೆ. ಪರಿಷತ್ ಸದಸ್ಯರು, ವಿಧಾನಸಭೆ ಶಾಸಕರು ಸಾಲು ಸಾಲಾಗಿ ಭೇಟಿ ನೀಡುತ್ತಿದ್ದಾರೆ.
ಡಿಕೆ ಶಿವಕುಮಾರ್ ನಿವಾಸಕ್ಕೆ ರಾತ್ರೋರಾತ್ರಿ ಶಾಸಕರ ದಂಡು
ಸಿದ್ದರಾಮಯ್ಯ ಪರ ಮತ್ತು ಡಿಕೆ ಶಿವಕುಮಾರ್ಗೆ ಎಷ್ಟು ಶಾಸಕರ ಬೆಂಬಲವಿದೆ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ. ನಿನ್ನೆ ಶುಕ್ರವಾರ ರಾತ್ರಿ ಡಿಸಿಎಂ ಅವರ ಸದಾಶಿವನಗರದ ನಿವಾಸಕ್ಕೆ ಶಾಸಕ ಸಿಪಿ ಯೋಗೇಶ್ವರ್, ಪ್ರಕಾಶ್ ಕೋಳಿವಾಡ್ ಹಾಗೂ ಯಾಸೀರ್ ಪಠಾಣ್, ಶ್ರೀನಿವಾಸ್ ಮಾನೆ, ಎಂಎಲ್ಸಿ ದಿನೇಶ್ ಗೂಳಿಗೌಡ, ಮಾಜಿ ಸಂಸದ ಶಿವರಾಮೇಗೌಡ, ಕಾಂಗ್ರೆಸ್ ಮುಖಂಡ ಆನಂದಗಡ್ಡದೇವರ ಮಠ ಭೇಟಿ ನೀಡಿ ಚರ್ಚಿಸಿದ್ದಾರೆ. ಡಿಕೆಶಿ ಮತ್ತು ಡಿಕೆ ಸುರೇಶ್ ಜೊತೆ ಕೆಲಕಾಲ ಮಾತುಕತೆ ನಡೆಸಿ ಮಾತುಕತೆ ನಡೆಸಿದ್ದಾರೆ.
ಇಂದು ಬೆಂಗಳೂರಿಗೆ ಖರ್ಗೆ, ಸಿಎಂ-ಡಿಸಿಎಂಗೆ ಬುಲಾವ್
ಅಧಿಕಾರ ಹಂಚಿಕೆ ಕಲಹ ತೀವ್ರಗೊಳ್ಳುತ್ತಿದ್ದಂತೆಯೇ ದೆಹಲಿಯಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ನಿನ್ನೆ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಕಳೆದ ಶನಿವಾರ ದೆಹಲಿ ಭೇಟಿ ವೇಳೆ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿಯನ್ನು ಬೇಟಿಯಾಗಿದ್ದರು. ಈ ವೇಳೆ ಸಂಪುಟ ಪುನಾರಚನೆ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ರಾಹುಲ್ ಗಾಂಧಿ ಅದನ್ನು ಖರ್ಗೆಯವರಿಗೆ ವಹಿಸಿದ್ದಾರೆ ಎಂದು ತಿಳಿದುಬಂದಿದೆ. ದೆಹಲಿಯಲ್ಲೇ ಖರ್ಗೆಯನ್ನು ಭೇಟಿಯಾಗಿ ಸಿದ್ದರಾಮಯ್ಯ ಸಂಪುಟ ಪುನಾರಚನೆ ಸೂತ್ರ ಮುಂದಿಟ್ಟಿದ್ದರು. ಆದರೆ, ಖರ್ಗೆ ಮಾತ್ರ ರಾಹುಲ್ ಗಾಂಧಿ ಜೊತೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದರು.
ಸಂಪುಟ ಪುನಾರಚನೆ
ಈಗ ಸಂಪುಟ ಪುನಾರಚನೆಗೆ ಡಿಕೆ ಶಿವಕುಮಾರ್ ಬಣ ವಿರೋಧ ವ್ಯಕ್ತಪಡಿಸಿದೆ. ಎರಡೂ ಬಣಗಳ ನಡುವಿನ ಭಿನ್ನಾಭಿಪ್ರಾಯವನ್ನು ಖರ್ಗೆಯವರು ಹೇಗೆ ಬಗೆಹರಿಸುತ್ತಾರೆ ಎಂಬುದು ಕುತೂಹಲವಾಗಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರಿಗೂ ಬುಲಾವ್ ನೀಡಿ ಮಾತುಕತೆಗೆ ಬನ್ನಿ ಎಂದು ಖರ್ಗೆ ಹೇಳಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಿಎಂ ಹುದ್ದೆ ಹಂಚಿಕೆ ಬಗ್ಗೆ ನಡೆಯುತ್ತಿರುವ ಗೊಂದಲಗಳಿಗೆ ತೆರೆ ಎಳೆಯುತ್ತಾರಾ ಎಂಬುದು ಪ್ರಶ್ನೆಯಾಗಿದೆ.
Advertisement