

ಬೆಂಗಳೂರು: ಇಂದು ಯಾರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೋ ಆ ಮಹಾನುಭಾವರೇ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ತೆಗೆದರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸದೆ ಅಸಮಾಧಾನ ಹೊರಹಾಕಿದ್ದಾರೆ.
ಜೆಡಿಎಸ್ ಪಕ್ಷಕ್ಕೆ 25 ವರ್ಷ ತುಂಬಿದ ಹಿನ್ನೆಲೆ ಬೆಂಗಳೂರಿನಲ್ಲಿರುವ ಜೆಪಿ ಭವನದ ಪಕ್ಷದ ಕಚೇರಿಯ ಆವರಣದಲ್ಲಿ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ, ಮಾಜಿ ಪ್ರಧಾನಿ ದೇವೇಗೌಡರು, ಹಿಂದಿನ ಮೈತ್ರಿ ಸರ್ಕಾರದ ಪಥನ ವಿಚಾರವನ್ನ ಪ್ರಸ್ತಾಪಿಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಈಗಿರುವ ಮುಖ್ಯಮಂತ್ರಿಯೇ ಅಂದಿನ ಮೈತ್ರಿ ಸರ್ಕಾರವನ್ನ ಉರುಳಿಸಿದ್ದರು, 18 ಜನರನ್ನ ದೆಹಲಿಗೆ ಕಳುಹಿಸಿದ್ದರು, ಸತ್ಯಕ್ಕೆ ಬೆಲ ಇದೆ, ಸತ್ಯ ಮುಚ್ಚಿಡಲು ಆಗಲ್ಲ, ಯಾರೂ ತಪ್ಪಿಸಿಕೊಳ್ಳೋಕೆ ಆಗಲ್ಲ, ದೈವದ ಅನುಗ್ರಹ ಇರುತ್ತದೆ ಎನ್ನುವ ಮೂಲಕ ದೊಡ್ಡಗೌಡರು ಸಿಎಂ ಸಿದ್ದರಾಮಯ್ಯ ಅವರನ್ನ ಮಾತಿನಲ್ಲೇ ಕುಟುಕಿದರು.
ನಾಳೆ ಮತ್ತೆ ಪುನಃ ಮಾತನಾಡುತ್ತೇನೆ ಎಂದು ಹೇಳುವ ಮೂಲಕ ಕೂತುಹಲ ಮೂಡಿಸಿದ್ರು. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿ ಅನುಭವ ಪಡೆದುಕೊಂಡಿದ್ದಾರೆ. ರಾಜ್ಯದ ಸಮಸ್ಯೆ ಅವರಿಗೆ ಗೊತ್ತಿದೆ, ರಾಜ್ಯದಲ್ಲಿ ಮತ್ತೆ ಜೆಡಿಎಸ್ ತಲೆ ಎತ್ತಿ ನಿಲ್ಲಬೇಕು, ಬಾಕಿ ವಿಚಾರಗಳನ್ನ ನಾಳೆ ಮಾತನಾಡಿ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಹಾಗಾಗಿ ನಾಳೆ ಮಾತನಾಡುತ್ತೇನೆ ಎಂದು ಹೇಳಿದರು.
ದೇವೇಗೌಡರು ಮುಗಿದೇ ಹೋದ್ರು ಅಂತಾ ಅನೇಕರು ತಿಳಿದುಕೊಂಡಿದ್ದಾರೆ. 93ನೇ ವಯಸ್ಸಿನಲ್ಲಿ ಧ್ವಜಾರೋಹಣ ಮಾಡ್ತಿದ್ದೇನೆ, ಪಕ್ಷಕ್ಕೆ ಹೋರಾಡುವ ಶಕ್ತಿ ನನಗಿದೆ. ದಿನಕ್ಕೆ ನಾಲ್ಕೈದು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ತಿದ್ದೇನೆ, ಇದು ದೊಡ್ಡ ಸಮಸ್ಯೆ ಅಲ್ಲ. ಸವಿಸ್ತಾರವಾಗಿ ಮಾತನಾಡುವ ಶಕ್ತಿ ಪರಮಾತ್ಮ ಕೊಟ್ಟಿದ್ದಾನೆ. ಜೆಡಿಎಸ್ ಮತ್ತೊಮ್ಮೆ ತಲೆ ಎತ್ತಿ ನಿಲ್ಲಬೇಕು ಅಂತಾ ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.
ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷ 25 ವರ್ಷ ಪೂರೈಸಿದ್ದು, ಈ ಹಿನ್ನೆಲೆ ಜೆಪಿ ಭವನದ ಪಕ್ಷದ ಕಚೇರಿಯ ಆವರಣದಲ್ಲಿ ರಜತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಜೆಡಿಎಲ್ಪಿ ನಾಯಕ ಸುರೇಶ್ ಬಾಬು, ಸೇರಿದಂತೆ ಮಹಾರಾಷ್ಟ್ರ, ಕೇರಳ, ಬಿಹಾರ, ಉತ್ತರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳದ ರಾಜ್ಯಾದ್ಯಕ್ಷರು ಕಾರ್ಯದರ್ಶಿಗಳು ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಮತ್ತೊಮ್ಮೆ ಈ ರಾಜ್ಯದಲ್ಲಿ ತಲೆ ಎತ್ತಿ ನಿಲ್ಲಬೇಕು. ನಾವು ಎನ್‌ಡಿಎ ಮೈತ್ರಿಕೂಟದಲ್ಲಿ ಇದ್ದೇವೆ. ಇದರಲ್ಲಿ ಏನೂ ಮುಚ್ಚುಮರೆಯಿಲ್ಲ. ಕುಮಾರಸ್ವಾಮಿ ಅವರು ಈಗ ಕೇಂದ್ರ ಮಂತ್ರಿಯಾಗಿದ್ದಾರೆ. ಈ ಪಕ್ಷದ ನಾಯಕತ್ವ ವಹಿಸಿ ಎರಡು ಬಾರಿ ಮುಖ್ಯಮಂತ್ರಿ ಆಗಿ ಅನುಭವ ಪಡೆದಿದ್ದಾರೆ. ಈ ರಾಜ್ಯದ ಮೂಲೆ ಮೂಲೆ ಬಗ್ಗೆ ತಿಳಿದುಕೊಂಡಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಗೊತ್ತಿದೆ. ಹೀಗಾಗಿ ಅವರ ನಾಯಕತ್ವದಲ್ಲಿ ಮತ್ತೊಮ್ಮೆ ಜೆಡಿಎಸ್ ಈ ರಾಷ್ಟ್ರದಲ್ಲಿ ತಲೆ ಎತ್ತಿ ನಿಲ್ಲಬೇಕು ಎಂಬುದು ನನ್ನ ಆಕಾಂಕ್ಷೆ ಮತ್ತು ಅಭಿಲಾಷೆ ಎಂದು ಗೌಡರು ತಮ್ಮ ಮನದ ಇಂಗಿತ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷರಾಗಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಂದುವರೆಸಲು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ತೀರ್ಮಾನಿಸಲಾಯಿತು.
Advertisement