

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಸಂಘರ್ಷದ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ 'ಕುದುರೆ ವ್ಯಾಪಾರ' ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಶನಿವಾರ ಹೇಳಿದ್ದಾರೆ.
ಜೈಲಿನಲ್ಲಿರುವ ಶಾಸಕರಾದ ವಿನಯ್ ಕುಲಕರ್ಣಿ ಮತ್ತು ಪಪ್ಪಿ ಎಂದು ಕರೆಯಲ್ಪಡುವ ಕೆ.ಸಿ. ವೀರೇಂದ್ರ ಅವರನ್ನು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಭೇಟಿ ಮಾಡಿ ತಮ್ಮನ್ನು ಬೆಂಬಲಿಸುವಂತೆ ಕೇಳಿಕೊಳ್ಳುವುದು ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ಸಚಿವರು ಕಿಡಿ ಕಾರಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, "ಕಾಂಗ್ರೆಸ್‌ನಲ್ಲಿ ಒಳಜಗಳವಿದೆ. ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡಲು ಬಯಸುವುದಿಲ್ಲ. ಆದರೆ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುವುದನ್ನು ಶಿವಕುಮಾರ್ ಇಷ್ಟಪಡುವುದಿಲ್ಲ" ಎಂದರು.
"ಇಂತಹ ಪರಿಸ್ಥಿತಿಯಿಂದಾಗಿ, ಎರಡೂ ಬಣಗಳು ಈಗ ಶಾಸಕರನ್ನು ಖರೀದಿಸಲು ಪ್ರಯತ್ನಿಸುತ್ತಿವೆ. ಶಾಸಕರ ಬೆಂಬಲ ಪಡೆಯಲು ಮತ್ತು ಅವರಿಗೆ ಹಣ ಪಾವತಿಸಲು ಶಿವಕುಮಾರ್ ಜೈಲಿಗೆ ಹೋಗಿರುವುದನ್ನು ನೀವು ನೋಡಿರಬಹುದು" ಎಂದು ವಾಗ್ದಾಳಿ ನಡೆಸಿದರು.
ಶಾಸಕರ "ಕುದುರೆ ವ್ಯಾಪಾರ" ನಡೆಯುತ್ತಿರುವ ಹಂತಕ್ಕೆ ಕಾಂಗ್ರೆಸ್ ಪರಿಸ್ಥಿತಿ ತಲುಪಿದೆ. ಅಧಿಕಾರಕ್ಕಾಗಿ ಇವರು ಆಡಳಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಇದರಿಂದಾಗಿ ಬೆಂಗಳೂರಿನಂತಹ ನಗರದಲ್ಲೇ ಹಾಡಹಗಲೇ ದರೋಡೆಗಳು ನಡೆಯುತ್ತಿವೆ. ಸರ್ಕಾರ ಬ್ರಹ್ಮಾಂದ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ಈ ಸರ್ಕಾರ ಐದು ವರ್ಷ ಆಡಳಿತ ಮಾಡಲು ಜನ ಬಹುಮತ ನೀಡಿದ್ದಾರೆ. ಐದು ವರ್ಷ ಈ ಸರ್ಕಾರ ನಡೆಯಲಿ ಎಂಬುದು ನಮ್ಮ ಆಶಯ. ಭ್ರಷ್ಟಾಚಾರದಲ್ಲಿ ತೊಡಗಿರುವ ಕಾಂಗ್ರೆಸ್ಸಿಗರ ಜೊತೆಗೆ ಸರ್ಕಾರ ರಚಿಸುವ ಇಂಗಿತ ನಮ್ಮ ಪಕ್ಷಕ್ಕೆ ಇಲ್ಲ. ಮಹಾರಾಷ್ಟ್ರ ಹಾಗೂ ಕರ್ನಾಟಕದ ಪರಿಸ್ಥಿತಿ ವಿಭಿನ್ನವಾಗಿದೆ. ಹೀಗಾಗಿ ಕಾಂಗ್ರೆಸ್ ನಿಂದ ಹೊರಬರುವವರ ಜೊತೆ ಬಿಜೆಪಿ ಸರ್ಕಾರ ರಚಿಸುತ್ತದೆ ಎಂಬುದು ದೂರದ ಮಾತು ಎಂದು ಜೋಶಿ ಸ್ಪಷ್ಟಪಡಿಸಿದರು.
17.94 ಲಕ್ಷ ಮೆಟ್ರಿಕ್ ಟನ್ ಆಮದು ಕಾರಣದಿಂದ ಮೆಕ್ಕೆಜೋಳದ ಬೆಲೆ ಕುಸಿತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದ ಬಗ್ಗೆ, ಅಂಕಿಅಂಶಗಳು ಸುಳ್ಳು ಎಂದು ಜೋಶಿ ಹೇಳಿದರು.
"ಮುಖ್ಯಮಂತ್ರಿಗಳು 17.94 ಲಕ್ಷ ಟನ್ ಮೆಕ್ಕೆಜೋಳ ಆಮದು ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದು ತಪ್ಪು ಮಾಹಿತಿ. ಸರಿಯಾದ ಮಾಹಿತಿ ಪಡೆಯದೆ ಮುಖ್ಯಮಂತ್ರಿಗಳು ಅಂಕಿಅಂಶಗಳನ್ನು ಹಂಚಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ. ಕಳೆದ ಬಾರಿ ಕಬ್ಬಿನ ಪ್ರತಿಭಟನೆಯ ಸಮಯದಲ್ಲಿ ಅವರು ಅದನ್ನೇ ಮಾಡಿದರು ಮತ್ತು ನಾನು ಪ್ರತಿಕ್ರಿಯಿಸಿದಾಗ ಅವರ ಬಳಿ ಯಾವುದೇ ಉತ್ತರ ಇರಲಿಲ್ಲ" ಎಂದು ಕೇಂದ್ರ ಸಚಿವರು ಹೇಳಿದರು.
ಎರಡು ವರ್ಷಗಳ ಹಿಂದೆ, ಕಬ್ಬಿನ ಉತ್ಪಾದನೆ ಕಡಿಮೆಯಾದ ಕಾರಣ 9.5 ಲಕ್ಷ ಮೆಟ್ರಿಕ್ ಟನ್ ಆಮದು ಮಾಡಿಕೊಳ್ಳಲಾಗಿದೆ ಎಂದು ಅವರು ಜೋಶಿ ತಿಳಿಸಿದರು.
Advertisement