

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ವಿಷಯ ತೀವ್ರವಾಗಿ ಚರ್ಚೆಯಾಗುತ್ತಿರುವ ನಡುವೆ ಸಿಎಂ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಇಂದು ಸಂಜೆ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ರಾಜ್ಯ ರಾಜಕೀಯದ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಖರ್ಗೆ ನಿವಾಸದಿಂದ ಹೊರಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ನಿರ್ಣಯಕ್ಕೆ ನಾನು ಬದ್ಧ, ಹೈಕಮಾಂಡ್ ನಿರ್ಣಯವನ್ನ ನಾನೂ ಒಪ್ಪಬೇಕು, ಡಿಕೆ ಶಿವಕುಮಾರ್ ಸಹ ಒಪ್ಪಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಇದು ಕೇವಲ ಸೌಹಾರ್ದಯುತ ಭೇಟಿ ಅಷ್ಟೇ ನಾಯಕತ್ವ ಬದಲಾವಣೆ ಬರೀ ಊಹಾಪೋಹ. ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಪಕ್ಷ ಸಂಘಟನೆ ಬಗ್ಗೆ ಮಾತಾಡಿದೆ. ಮುಂದಿನ ಚುನಾವಣೆ ತಯಾರಿ ಬಗ್ಗೆ ಚರ್ಚೆಯೂ ನಡೆಯಿತು. ನಾಯಕತ್ವ ಬದಲಾವಣೆ ಊಹಾಪೋಹ, ಈ ಊಹಾಪೋಹಗಳನ್ನು ನೀವೇ ಸೃಷ್ಟಿಸಿದ್ದು ಎಂದು ಸಿಎಂ ಮಾಧ್ಯಮಗಳಿಗೆ ಹೇಳಿದರು.
ಹೈಕಮಾಂಡ್ ಯಾವಾಗ ಕರೆಯುತ್ತೋ ಆಗ ನಾನು ದೆಹಲಿಗೆ ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದ್ದಾರೆ.
ಖರ್ಗೆ ಭೇಟಿ ವೇಳೆ ಡಿ.ಕೆ. ಶಿವಕುಮಾರ್ ಆಪ್ತರ ನಡೆ ವಿರುದ್ದ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವಕುಮಾರ್ ಆಪ್ತರು ದೆಹಲಿ ಪೆರೇಡ್ ನಡೆಸುತ್ತಿರುವುದನ್ನು ಪ್ರಸ್ತಾಪಿಸಿರುವ ಸಿಎಂ ಸಿದ್ದರಾಮಯ್ಯ, ಸಿಎಂ ಬದಲಾವಣೆ ಆಗಬೇಕೆಂದು ಕೆಲ ಶಾಸಕರು ಮಾತಾಡಿದ್ದಾರಂತೆ. ಅದಕ್ಕಾಗಿಯೇ ದೆಹಲಿಗೆ ಹೋಗಿದ್ದೇವೆ ಎಂದು ಹೇಳಿದ್ದಾರೆ. ಇದರಿಂದ ಸಾಕಷ್ಟು ಗೊಂದಲ ಆಗಿದೆ ಅಂತ ಖರ್ಗೆ ಎದುರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
Advertisement