

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಪಟ್ಟಕ್ಕಾಗಿ ಫೈಟ್ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕುರ್ಚಿ ಕಾಳಗ ಈಗ ಪೋಸ್ಟ್ ವಾರ್ ತನಕ ತಲುಪಿದೆ.
ಕೊಟ್ಟ ಮಾತು ಉಳಿಸಿಕೊಳ್ಳುವುದೇ ಜಗತ್ತಿನ ಶಕ್ತಿ. ನ್ಯಾಯಾಧೀಶರಾಗಲಿ, ರಾಷ್ಟ್ರಪತಿಯಾಗಲಿ, ನಾನಾಗಲಿ, ಕೊಟ್ಟ ಮಾತಿಗೆ ತಕ್ಕಂತೆ ನಡೆಯಬೇಕೆಂದು ಎಂದು ಬುಧವಾರ ಡಿಕೆ ಶಿವಕುಮಾರ್ ಅವರು ಪೋಸ್ಟ್ ಹಾಕುವ ಮೂಲಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದರು.
ರಾಜ್ಯದ ಜನತೆಗೆ ನಾವು ಕೊಟ್ಟ ಮಾತು ಕೇವಲ ಘೋಷಣೆ ಅಲ್ಲ, ನಾವು ಜನತೆಗೆ ಕೊಟ್ಟ ಮಾತೇ ನಮಗೆ ಜಗತ್ತು ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಡಿಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ಮಾತು ಎಂದರೆ ಶಕ್ತಿ ಅಲ್ಲ, ಅದು ಜನರ ಹಿತಕ್ಕಾಗಿ ಲೋಕವನ್ನು ಉತ್ತಮಗೊಳಿಸಿದಾಗ ಮಾತ್ರ ಶಕ್ತಿಯಾಗುತ್ತದೆ. ನಮ್ಮ ರಾಜ್ಯದ ಮಹಿಳೆಯರಿಗೆ 600 ಕೋಟಿಗೂ ಹೆಚ್ಚು ಉಚಿತ ಪ್ರಯಾಣಗಳನ್ನು ನೀಡಿದ ಶಕ್ತಿ ಯೋಜನೆಯ ಯಶಸ್ಸನ್ನು ಘೋಷಿಸುವ ಹೆಮ್ಮೆ ನನಗಿದೆ. ಸರ್ಕಾರವನ್ನು ರಚಿಸಿದ ಮೊದಲ ತಿಂಗಳಿನಿಂದಲೇ, ನಾವು ನಮ್ಮ ಭರವಸೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ; ಮಾತಿನಲ್ಲಿ ಅಲ್ಲ, ಕಾರ್ಯದಲ್ಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನನ್ನ ಮೊದಲ ಅವಧಿಯಲ್ಲಿ(2013–18) 165 ಭರವಸೆಗಳಲ್ಲಿ 157ಕ್ಕಿಂತ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ. ಈ ಅವಧಿಯಲ್ಲಿ, 593 ಭರವಸೆಗಳಲ್ಲಿ ಈಗಾಗಲೇ 243ಕ್ಕೂ ಹೆಚ್ಚು ಭರವಸೆಗಳು ಈಡೇರಿಸಲಾಗಿದೆ. ಉಳಿದಿರುವ ಪ್ರತಿಯೊಂದು ಭರವಸೆಯನ್ನು ಬದ್ಧತೆ, ವಿಶ್ವಾಸಾರ್ಹತೆ ಮತ್ತು ಕಾಳಜಿಯೊಂದಿಗೆ ಈಡೇರಿಸುತ್ತೇವೆ ಎಂದಿದ್ದಾರೆ.
ಕರ್ನಾಟಕದ ಜನರು ನೀಡಿದ ಜನಾದೇಶವು ಒಂದು ಕ್ಷಣಕ್ಕಾಗಿ ಅಲ್ಲ, ಅದು ಐದು ವರ್ಷಗಳ ಪೂರ್ಣ ಜವಾಬ್ದಾರಿಯಾಗಿದೆ. ನಾನು ಸೇರಿದಂತೆ ಕಾಂಗ್ರೆಸ್ ಪಕ್ಷವು ನಮ್ಮ ಜನರ ಪರವಾಗಿ ಸಹಾನುಭೂತಿ, ಸ್ಥಿರತೆ ಮತ್ತು ಧೈರ್ಯದಿಂದ ನಡೆದುಕೊಳ್ಳುತ್ತಿದೆ.
ಕರ್ನಾಟಕಕ್ಕೆ ನಮ್ಮ ಮಾತು ಒಂದು ಘೋಷಣೆಯಲ್ಲ, ಅದು ನಮಗೆ ಜಗತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
Advertisement