

ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರು ಪಕ್ಷದ ಹಿರಿಯ ನಾಯಕರು. ಕಾಂಗ್ರೆಸ್ ಪಕ್ಷವನ್ನು 2028 ಹಾಗೂ 2029 ರ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವ ಕಾರ್ಯತಂತ್ರದ ಬಗ್ಗೆ ಅವರ ಜತೆ ಚರ್ಚೆ ನಡೆಸಲಾಯಿತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು. ನೀವು ಒಕ್ಕಲಿಗರ ನಾಯಕರಲ್ಲ ಎಂದು ಆರ್.ಅಶೋಕ್ ಅವರು ಹೇಳಿರುವ ಬಗ್ಗೆ ಕೇಳಿದಾಗ, "ನಾನು ಒಕ್ಕಲಿಗರ ನಾಯಕ ಎಂದು ಯಾವಾಗ ಹೇಳಿದ್ದೇನೆ? ನಾನು ಕಾಂಗ್ರೆಸ್ ಪಕ್ಷದ ನಾಯಕ. ಒಕ್ಕಲಿಗನಾಗಿ ಹುಟ್ಟಿದ್ದೇನೆ ಅಷ್ಟೇ. ಇದರಲ್ಲಿ ಅನುಮಾನವಿಲ್ಲ. ನಾವು ಬಿಟ್ಟರು ಧರ್ಮ ಮತ್ತು ಜಾತಿ ನಮ್ಮನ್ನು ಬಿಡುವುದಿಲ್ಲ" ಎಂದರು.
ಅಶೋಕ್ ಅವರೇ ಒಕ್ಕಲಿಗರ ನಾಯಕ ಪದ ತೆಗೆದುಕೊಂಡು, ಬ್ಯಾಡ್ಜ್ ಹಾಕಿಕೊಂಡಿದ್ದಾರೆ. ನಾನೇ ಅವರಿಗೆ ಒಕ್ಕಲಿಗ ನಾಯಕ ಬ್ಯಾಡ್ಜ್ ಕಳಿಸಿಕೊಡುತ್ತೇನೆ. ಅದನ್ನು ಅಶೋಕಣ್ಣ ಹಾಕಿಕೊಳ್ಳಲಿ. ಚಕ್ರವರ್ತಿ, ಸಾಮ್ರಾಟ್ ಅಶೋಕ್ ಎನ್ನುವ ಒಳ್ಳೆ ಪದವಿ ಅಶೋಕಣ್ಣನಿಗೆ ಇದೆ" ಎಂದು ವ್ಯಂಗ್ಯವಾಡಿದರು.
ನೀವು ಮತ್ತು ಸಿದ್ದರಾಮಯ್ಯ ಅವರು ಜೋಡೆತ್ತುಗಳಂತೆ ಪಕ್ಷವನ್ನು ಅಧಿಕಾರಕ್ಕೆ ತಂದವರು. ನಿಮ್ಮ ಶ್ರಮಕ್ಕೆ ಫಲ ಸಿಗಲಿದೆಯೇ ಎಂದು ಕೇಳಿದಾಗ, "ಈಗ ಇಬ್ಬರೂ ಜೊತೆಯಲ್ಲೇ ಸರ್ಕಾರ ನಡೆಸುತ್ತಿದ್ದೇವಲ್ಲ. ಎಲ್ಲರೂ ಒಟ್ಟಿಗೆ ಸರ್ಕಾರ ತೆಗೆದುಕೊಂಡು ಹೋಗುತ್ತಿದ್ದೇವೆ. ಜನರಿಗೆ ಏನು ಬೇಕೋ ಅದೆಲ್ಲವನ್ನೂ ಕೊಡುತ್ತಿದ್ದೇವಲ್ಲ" ಎಂದರು.
ನನ್ನ ಮೇಲೆ ಶೋಷಣೆ ಮಾಡುತ್ತಿರುವುದಕ್ಕೆ ಮಾಧ್ಯಮಗಳ ಮೇಲೆ ಪ್ರಕರಣ ದಾಖಲು ಮಾಡಬೇಕಾಗುತ್ತದೆ. ನನಗೆ ದಿಗ್ಬಂದನ ವಿಧಿಸಿದ್ದೀರ ಎಂದು ಹಾಸ್ಯ ಚಟಾಕಿ ಹಾರಿಸಿದರು. ಬಿಜೆಪಿ ಹಾಗೂ ಜನತಾದಳದ ನಾಯಕರು ನಮ್ಮ ಪಕ್ಷದ ವಿಚಾರವನ್ನು ಬಹಿರಂಗವಾಗಿ ಮಾತನಾಡುವ ಅವಶ್ಯಕತೆಯಿಲ್ಲ. ಅವರು ತಮ್ಮ ಪಕ್ಷದಲ್ಲಿರುವ ಸಮಸ್ಯೆಗಳ ನ್ನು ನೋಡಿಕೊಳ್ಳಲಿ. ಪಕ್ಷ ನನ್ನ ಹಿತ ಕಾಯಲಿದೆ. ನನ್ನ ಕಷ್ಟ ಕಾಲದಲ್ಲಿ ಪಕ್ಷ ನನ್ನ ಬೆನ್ನಿಗೆ ನಿಂತಿದೆ. ವಿರೋಧ ಪಕ್ಷದವರು ನನ್ನ ಬಗ್ಗೆ ಕಾಳಜಿವಹಿಸುವುದು ಬೇಡ. ನಾನು ಅಪ್ಪಟ ಕಾಂಗ್ರೆಸ್ಸಿಗ" ಎಂದರು.
ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ 29 ರಂದು ದೆಹಲಿಯಲ್ಲಿ ಸಭೆಯಿದೆ ಎನ್ನುವ ಬಗ್ಗೆ ಕೇಳಿದಾಗ, "28 ಸಂವಿಧಾನ ದಿನ, ಅಂಗನವಾಡಿ ಯೋಜನೆಗೆ 50 ವರ್ಷ ತುಂಬಿದ ಸಮಾರಂಭಗಳಿವೆ. 29ನೇ ತಾರೀಕು ಇನ್ನೂ ದೂರವಿದೆ, ನೋಡೋಣ" ಎಂದರು. ಮುಖ್ಯಮಂತ್ರಿ ಹುದ್ದೆ ಅಥವಾ ಉನ್ನತ ಅಧಿಕಾರ ಮುಖ್ಯವಲ್ಲ. ಪಕ್ಷದ ಎಲ್ಲರೊಡನೆ ಒಟ್ಟಾಗಿ ಕೆಲಸ ಮಾಡಿ, ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವುದು ಮುಖ್ಯ" ಎಂದರು.
Advertisement