

ಮೈಸೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರ ಪುತ್ರ ಮತ್ತು ಕಾಂಗ್ರೆಸ್ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಅವರು, ತಮ್ಮ ತಂದೆಯ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ ಮತ್ತು ಅವರು ಯಾವುದೇ ಹಗರಣಗಳಲ್ಲಿ ಭಾಗಿಯಾಗಿಲ್ಲ ಎಂದು ಗುರುವಾರ ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ ಮತ್ತು ಶಾಸಕರ ಬೆಂಬಲ ಹೊಂದಿದ್ದಾರೆ ಎಂದು ಪ್ರತಿಪಾದಿಸಿದ ಯತೀಂದ್ರ, ಮುಖ್ಯಮಂತ್ರಿ ಬದಲಾವಣೆಗೆ ಒತ್ತಾಯಿಸುತ್ತಿರುವ ಕೆಲವು ವರ್ಗಗಳ ಬೇಡಿಕೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.
"ಹೈಕಮಾಂಡ್ ಏನು ನಿರ್ಧರಿಸುತ್ತದೆಯೋ ಅದು ಅಂತಿಮ. ಆದ್ದರಿಂದ ಹೈಕಮಾಂಡ್ ಹೇಳುವ ಮೊದಲು ನಾವು ಪ್ರತಿಕ್ರಿಯಿಸುವುದು ಸರಿಯಲ್ಲ" ಎಂದು ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಯತೀಂದ್ರ ಉತ್ತರಿಸಿದರು.
ಸಿದ್ದರಾಮಯ್ಯ ಐದು ವರ್ಷಗಳ ಕಾಲ ಸಿಎಂ ಆಗಿರುತ್ತಾರೆಯೇ ಎಂದು ಕೇಳಿದಾಗ, ಪಕ್ಷದ ಕಾರ್ಯಕರ್ತ ಮತ್ತು ಎಂಎಲ್‌ಸಿಯಾಗಿ, ಮುಖ್ಯಮಂತ್ರಿ ಬದಲಾವಣೆಯ ಯಾವುದೇ ಪರಿಸ್ಥಿತಿ ಸದ್ಯ ಕಾಣುತ್ತಿಲ್ಲ. ಏಕೆಂದರೆ ಮುಖ್ಯಮಂತ್ರಿ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪ ಅಥವಾ ಯಾವುದೇ ಹಗರಣದಲ್ಲಿ ಅವರು ಭಾಗಿಯಾಗಿಲ್ಲ ಎಂದರು.
ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂಬ ಒಕ್ಕಲಿಗ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಅವರ ಹೇಳಿಕೆಯ ಬಗ್ಗೆ ಕೇಳಿದಾಗ, ಕಾಂಗ್ರೆಸ್ ಪಕ್ಷವು ಸಿಎಂ ಯಾರಾಗಬೇಕೆಂದು ನಿರ್ಧರಿಸುತ್ತದೆ. ಈ ವಿಷಯದ ಬಗ್ಗೆ ಇತರರು ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದರು.
ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಮತ್ತು ಯಾರೂ ಅದರ ಬಗ್ಗೆ ತಮಗೆ ಹೇಳಿಲ್ಲ ಎಂದು ಎಂಎಲ್‌ಸಿ ಹೇಳಿದರು.
"ಕೊಟ್ಟ ಮಾತು ಉಳಿಸಿಕೊಳ್ಳುವುದು ದೊಡ್ಡ ಶಕ್ತಿ" ಎಂಬ ಶಿವಕುಮಾರ್ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಯತೀಂದ್ರ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂದು ನನಗೆ ಗೊತ್ತಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ. ಹೈಕಮಾಂಡ್ ಮಾತನ್ನು ಪಾಲಿಸುತ್ತಾರೆ. ಎಲ್ಲರೂ ಕೂಡ ಅದನ್ನೇ ಮಾಡುತ್ತಾರೆ. ಅದು ಯಾರೇ ಆಗಿರಲಿ" ಎಂದು ಹೇಳಿದರು.
ಕೊಟ್ಟ ಮಾತು ಏನು ಎಂದು ಕೇಳಿದಾಗ, "ನನಗೆ ಗೊತ್ತಿಲ್ಲ, ನೀವು ಅವರನ್ನೇ ಕೇಳಬೇಕು" ಎಂದರು.
Advertisement