

ಹಾವೇರಿ: ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ನಡೆಯುತ್ತಿರುವ ಫೈಟ್ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿರೋಧ ಪಕ್ಷ ಬಿಜೆಪಿ ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಪರಿಗಣಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿದ್ದಾರೆ.
ಇಂದು ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಸಿಎಂ ಹುದ್ದೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ 'ಕಪ್ಪು ಕುದುರೆ' ಸಹ ಸ್ಪರ್ಧೆಗೆ ಇಳಿಯಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ನಾಯಕತ್ವದ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಕಾಂಗ್ರೆಸ್ ಹೈಕಮಾಂಡ್ ಎರಡು ಮೂರು ಸೂತ್ರಗಳನ್ನು ಪ್ರಸ್ತಾಪಿಸಿದೆ ಎಂದು ಹಾವೇರಿ ಬಿಜೆಪಿ ಸಂಸದರು ಹೇಳಿದ್ದಾರೆ.
"ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವೆ ಸಿಎಂ ಹುದ್ದೆಗಾಗಿ ಕಾಂಗ್ರೆಸ್ ಪಕ್ಷದ ಆಂತರಿಕ ಜಗಳ ಹೀಗೆಯೇ ಮುಂದುವರಿದರೆ, ರಾಜ್ಯದಲ್ಲಿ ರಾಜಕೀಯ ಅಲ್ಲೋಲ-ಕಲ್ಲೋಲ ಆಗುವ ಸಾಧ್ಯತೆ ಇದೆ.ಕೇಂದ್ರದ ಕಾಂಗ್ರೆಸ್ ನಾಯಕರು ಇದನ್ನು ಬಗೆ ಹರಿಸಲು ಎರಡು ಮೂರು ಸೂತ್ರ ಬಿಟ್ಟರೂ, ಇಬ್ಬರೂ ನಾಯಕರೂ ಒಪ್ಪುತ್ತಿಲ್ಲ. ಇಬ್ಬರನ್ನೂ ಬಿಟ್ಟು ಬೇರೆ ಸೂತ್ರ ತಯಾರು ಮಾಡುವ ಮಾಹಿತಿ ಇದೆ ಎಂದರು.
ಕಾಂಗ್ರೆಸ್ ಪಕ್ಷದೊಳಗೆ ಉನ್ನತ ಹುದ್ದೆಗಾಗಿ ಹಗ್ಗಜಗ್ಗಾಟ ತೀವ್ರಗೊಂಡಿದೆ ಮತ್ತು ಕಾಂಗ್ರೆಸ್ ಹೈಕಮಾಂಡ್ ಅಸಹಾಯಕವಾಗಿದೆ ಎಂದು ವಾಗ್ದಾಳಿ ನಡೆಸಿದರು.
"ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ ಮತ್ತು ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಇಬ್ಬರೂ ನಾಯಕರು ಇದನ್ನು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗುವ ಸಾಧ್ಯತೆಯಿದೆ" ಎಂದು ಅವರು ಹೇಳಿದರು.
ಸಿಎಂ ರೇಸ್ ನಲ್ಲಿ ಈಗ ಕಾಣದಿರುವ ಕುದುರೆ ಸಹ ಕಾಣಬಹುದು. ಫೋಟೋದಲ್ಲಿ ಇರುವ ಕುದುರೆ ಓಡುವುದಿಲ್ಲ. ರಾಜ್ಯದಲ್ಲಿ ಏನಾದರೂ ಆಗಬಹುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಡಿಸೆಂಬರ್ 8ರ ವರೆಗೂ ಸಮಯ ಇದೆ. ಅಂತಹ ಸಂದರ್ಭ ಬಂದರೆ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಸಂಗ ಬರಬಹುದು ಎಂದರು.
Advertisement