
ಕೊಪ್ಪಳ: ತಮ್ಮ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ("ಜಾತಿ ಗಣತಿ" ಎಂದೇ ವ್ಯಾಪಕವಾಗಿ ಕರೆಯಲಾಗುತ್ತಿದೆ)ಯನ್ನು ಬಲವಾಗಿ ಸಮರ್ಥಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಮಾನತೆ, ಸಮ ಸಮಾಜ ಮತ್ತು ಬದಲಾವಣೆ ಬೇಡ ಎನ್ನುವವರು ಅದನ್ನು ವಿರೋಧಿಸುತ್ತಿದ್ದಾರೆ ಎಂದು ಸೋಮವಾರ ಹೇಳಿದ್ದಾರೆ.
ಇಂದು ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಾತಿ ಸಮೀಕ್ಷೆಯ ಗಡುವು ವಿಸ್ತರಿಸುವ ಬಗ್ಗೆ ಮಂಗಳವಾರ ಸಂಜೆಯೊಳಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಶೇ. 97ರಷ್ಟು ಸಮೀಕ್ಷೆ ಮುಗಿದಿದೆ. ಸಮೀಕ್ಷೆ ನಾಳೆ ಮುಗಿಯಬಹುದೆಂಬ ವಿಶ್ವಾಸ ಇದೆ. ನಾಳೆ ಸಾಯಂಕಾಲದವರೆಗೂ ಸಮಯವಿದೆ. ಇವತ್ತು ಮತ್ತು ನಾಳೆ ಎರಡು ದಿನಗಳಲ್ಲಿ ಸಮೀಕ್ಷೆ ಮುಗಿಯಬಹುದು" ಎಂದು ಸಿಎಂ ಹೇಳಿದರು.
ಜಾತಿ ಗಣತಿ ಮೇಲ್ವರ್ಗದವರನ್ನು ನಿಗ್ರಹಿಸುವ ಗುರಿ ಹೊಂದಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, "ಯಾರನ್ನೂ ನಿಗ್ರಹಿಸುವ ಪ್ರಶ್ನೆಯೇ ಇಲ್ಲ. ಸಮಾನತೆ ವಿರೋಧಿಸುವವರು ಇಂತಹ ದಾರಿತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಮಾಜದಲ್ಲಿ ಬದಲಾವಣೆಯನ್ನು ವಿರೋಧಿಸುವವರು ಅದನ್ನು (ಸಮೀಕ್ಷೆಯನ್ನು) ವಿರೋಧಿಸುತ್ತಿದ್ದಾರೆ" ಎಂದು ಹೇಳಿದರು.
"ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದಿವೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಬೇಕೇ ಅಥವಾ ಬೇಡವೇ? ಮಾಡದಿದ್ದರೆ, ವ್ಯಕ್ತಿಗಳ ಉದ್ಯೋಗ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ನಮಗೆ ಹೇಗೆ ತಿಳಿಯುತ್ತದೆ? ಸಮಾಜದಲ್ಲಿ ಒಬ್ಬರ ಪರಿಸ್ಥಿತಿ ಏನು? ನಮಗೆ ಡೇಟಾ ಬೇಕು. ಡೇಟಾವನ್ನು ಸಂಗ್ರಹಿಸಲು, ಈ ಸಮೀಕ್ಷೆ ಮಾಡಲಾಗುತ್ತಿದೆ" ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಮೀಕ್ಷೆಯಲ್ಲಿ ಭಾಗಿಯಾಗುವುದಿಲ್ಲ ಎಂಬ ಹೇಳಿಕೆಗೆ ಪ್ರತ್ರಿಕ್ರಿಯಿಸಿದ ಸಿಎಂ, ಕೇಂದ್ರ ಸರ್ಕಾರ ಜಾತಿ ಗಣತಿ ಮಾಡುತ್ತದೆ. ಆಗ ಅದನ್ನು ವಿರೋಧ ಮಾಡುತ್ತಾರಾ? ಇದನ್ನು ನೀವು ಅವರಿಗೆ ಕೇಳಿದ್ದೀರಾ? ಎಂದು ಮಾಧ್ಯಮದವರ ಮೇಲೆ ಗರಂ ಆದರು.
ಇದೇ ವೇಳೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಪ್ರತ್ರಿಕ್ರಿಯಿಸುತ್ತಾ, "ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ನನ್ನ ನಿಲುವೇನೂ ಇಲ್ಲ. ಈ ವಿಚಾರವಾಗಿ ಯಾವ ಮುನ್ನೆಲೆಯೂ ಇಲ್ಲ, ಹಿನ್ನೆಲೆಯೂ ಇಲ್ಲ. ಕೆಲ ವಿರಕ್ತ ಸ್ವಾಮೀಜಿಗಳು ಅದರ ಬಗ್ಗೆ ಮಾತನಾಡುತ್ತಿದ್ದಾರೆ" ಎಂದಷ್ಟೇ ಹೇಳಿದರು.
ಈ ಮಧ್ಯೆ ಸಿಎಂ, "ಕೊಪ್ಪಳದಲ್ಲಿ ನಾನೊಂದು ಸಲ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೆ ಜನ ಸೋಲಿಸಿದ್ದರು. ಆದರೂ ಅವತ್ತು ಕಡಿಮೆ ಅಂತರದಲ್ಲಿ ಸೋಲಿಸಿದ್ದಾರೆ. ಅದಕ್ಕೆ ಕೊಪ್ಪಳ ಜಿಲ್ಲೆಯ ಜನತೆಗೆ ಧನ್ಯವಾದ" ಎಂದರು.
Advertisement