
ಬೆಂಗಳೂರು: ಈ ವರ್ಷದ ಕೊನೆಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಸಾಧ್ಯತೆಯ ಬಗ್ಗೆ ಇರುವ ಊಹಾಪೋಹಗಳಿಗೆ ಅಂತ್ಯ ಹಾಡುವಂತೆ ಸಿದ್ದರಾಮಯ್ಯ ಸಂಪುಟದ ಇಬ್ಬರು ಹಿರಿಯ ಸಚಿವರು ಮಂಗಳವಾರ ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ನವೆಂಬರ್‌ನಲ್ಲಿ ಎರಡೂವರೆ ವರ್ಷ ಪೂರ್ಣಗೊಳಿಸಲಿದ್ದು, ಕೆಲವರು ಇದನ್ನು "ನವೆಂಬರ್ ಕ್ರಾಂತಿ" ಎಂದು ಕರೆಯುತ್ತಿದ್ದಾರೆ.
"ಹೈಕಮಾಂಡ್ ಹೇಳಲೇಬೇಕು. ಸಿಎಂ ಬದಲಾವಣೆ ಹೇಳಿಕೆಗಳಿಗೆ ಬ್ರೇಕ್ ಹಾಕಬೇಕು. ಈ ಬಗ್ಗೆ ಹೈಕಮಾಂಡ್ ಹೇಳಿದರೆ ಒಳ್ಳೆಯದು, ಇಲ್ಲದಿದ್ದರೆ ಅದು ಅಧಿಕಾರಶಾಹಿಯಲ್ಲಿ ಮತ್ತು ಪಕ್ಷದೊಳಗೆ ಗೊಂದಲವನ್ನು ಸೃಷ್ಟಿಸುತ್ತದೆ ಎಂದಿದ್ದಾರೆ.
ನನ್ನ ಅಭಿಪ್ರಾಯದಲ್ಲಿ ಈ ವಿಷಯಕ್ಕೆ ಆದಷ್ಟು ಬೇಗ ಪೂರ್ಣ ವಿರಾಮ ಹಾಕಬೇಕು" ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು ಸುದ್ದಿಗಾರರಿಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಾರಕಿಹೊಳಿ ಅವರ ಮಾತಿಗೆ ಸಮ್ಮತಿಸಿದ ಗೃಹ ಸಚಿವ ಜಿ ಪರಮೇಶ್ವರ ಅವರು ಸಹ ಪಕ್ಷದ ನಾಯಕತ್ವವು ಅನಿಶ್ಚಿತತೆಯನ್ನು ಪರಿಹರಿಸಬೇಕೆಂದು ಕೇಳಿಕೊಂಡರು.
"ಸತೀಶ್ ಜಾರಕಿಹೊಳಿ ಹೇಳಿದ್ದು ಸರಿ, ಪ್ರತಿದಿನ ನಾವು ನೋಡುತ್ತಿದ್ದೇವೆ. ಪ್ರತಿಯೊಬ್ಬರೂ(ಪಕ್ಷದಿಂದ) ಮಾಧ್ಯಮಗಳಲ್ಲಿ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಮಸ್ಯೆಯನ್ನು ಪರಿಹರಿಸಬೇಕು ಎಂಬ ಅವರ (ಜಾರಕಿಹೊಳಿ) ಹೇಳಿಕೆ ಸರಿಯಾಗಿದೆ. ಹೈಕಮಾಂಡ್ ಅದನ್ನು ಮಾಡುತ್ತದೆ. ಹೈಕಮಾಂಡ್‌ಗೆ ಎಲ್ಲಾ ತಿಳಿದಿದೆ ಮತ್ತು ಯಾವ ಪರಿಸ್ಥಿತಿಯಲ್ಲಿ ಯಾವ ಔಷಧಿ ನೀಡಬೇಕೆಂದು ಗೊತ್ತಿದೆ... ಸತೀಶ್ ಜಾರಕಿಹೊಳಿ ಹೇಳಿದಂತೆ, ನಾನು ಕೂಡ ಹೇಳುತ್ತೇನೆ - ಗೊಂದಲವನ್ನು ಪರಿಹರಿಸಿ" ಎಂದರು.
ಇದೇ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದ ಘಟನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, “ಈ ಘಟನೆ ಖಂಡನೀಯ. ಇದು ಕೇವಲ ಸಿಜೆ ಗವಾಯಿ ಅವರ ಪ್ರಶ್ನೆ ಅಲ್ಲ. ದೇಶದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಹಾಗೂ ಸಂವಿಧಾನದ ಸ್ಥಾನಕ್ಕೆ ಮಾಡಿದ ಅವಮಾನ” ಎಂದರು.
Advertisement