ಕುತೂಹಲ ಮೂಡಿಸಿದ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟ್: ಗರಿಗೆದರಿದ ಸಂಪುಟ ಪುನಾರಚನೆ, ಡಿಸಿಎಂ ಡಿಕೆಶಿ ಏನೆಂದರು?

ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂಬ ವದಂತಿಗಳ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಪಾಳಯಕ್ಕೆ ಯಾವುದೇ ಬದಲಾವಣೆ ಇಲ್ಲ, ನಾನೇ ಪೂರ್ಣ 5 ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಎಂಬ ಸಂದೇಶ ಸಾರುವುದು ಕೂಡ ಸಿದ್ದರಾಮಯ್ಯನವರ ಆಲೋಚನೆಯಾಗಿದೆ ಎಂದು ಹೇಳಲಾಗುತ್ತಿದೆ.
ಸಿಎಂ-ಡಿಸಿಎಂ
ಸಿಎಂ-ಡಿಸಿಎಂ
Updated on

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಈಗ ಸಂಪುಟ ಪುನಾರಚನೆ ಸದ್ದು ಮಾಡುತ್ತಿದೆ. ಬರುವ ನವೆಂಬರ್‌ಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ತನ್ನ ಅರ್ಧ ಅವಧಿಯನ್ನು ಪೂರ್ಣಗೊಳಿಸುವತ್ತ ಸಾಗುತ್ತಿರುವಾಗ, ಇದೇ ಅಕ್ಟೋಬರ್ 13 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಔತಣ ಕೂಟ ಏರ್ಪಡಿಸಿರುವುದು ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯನವರು ಔತಣ ಕೂಟಕ್ಕೆ ಸಹೋದ್ಯೋಗಿಗಳನ್ನು ಆಹ್ವಾನಿಸಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ನವೆಂಬರ್ ಮಧ್ಯಭಾಗದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯ ನಂತರ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ನೀಡುವ ನಿರೀಕ್ಷೆಯಲ್ಲಿದ್ದು ಕಾಂಗ್ರೆಸ್ ವಲಯದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.

ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂಬ ವದಂತಿಗಳ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಪಾಳಯಕ್ಕೆ ಯಾವುದೇ ಬದಲಾವಣೆ ಇಲ್ಲ, ನಾನೇ ಪೂರ್ಣ 5 ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಎಂಬ ಸಂದೇಶ ಸಾರುವುದು ಕೂಡ ಸಿದ್ದರಾಮಯ್ಯನವರ ಆಲೋಚನೆಯಾಗಿದೆ ಎಂದು ಹೇಳಲಾಗುತ್ತಿದೆ.

ಸಿಎಂ-ಡಿಸಿಎಂ
ನವೆಂಬರ್ ಕ್ರಾಂತಿ ಬರೀ ಭ್ರಾಂತಿಯಷ್ಟೇ: ಸಿಎಂ ಸಿದ್ದರಾಮಯ್ಯ

ನಿನ್ನೆ ಗುರುವಾರ, ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದರು. ಸಿದ್ದರಾಮಯ್ಯ ಅವರ ನಿಷ್ಠಾವಂತರಾದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಬೆಂಗಳೂರಿನಲ್ಲಿರುವ ಮಾಜಿ ಎಂಎಲ್‌ಸಿ ಎಂಸಿ ವೇಣುಗೋಪಾಲ್ ಅವರ ಅಪಾರ್ಟ್‌ಮೆಂಟ್‌ನಲ್ಲಿ ಉಪಹಾರ ಕೂಟದಲ್ಲಿ ಒಟ್ಟು ಸೇರಿದ್ದರು ಎನ್ನಲಾಗುತ್ತಿದೆ.

ನಾಯಕತ್ವ ಬದಲಾವಣೆ ವದಂತಿ

ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆಯ ಅಂತಿಮ ಸಾಧ್ಯತೆಯ ಬಗ್ಗೆ ಉಪಹಾರ ಕೂಟದಲ್ಲಿ ಸೇರಿದ್ದ ಈ ಮೂವರು ನಾಯಕರು ಚರ್ಚಿಸಿರಬಹುದು ಎಂದು ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುವುದರ ಜೊತೆಗೆ, ಶಕ್ತಿ ಪ್ರದರ್ಶನವಾಗಿ ಎಸ್‌ಸಿ/ಎಸ್‌ಟಿ ಸಮುದಾಯಗಳ ರ್ಯಾಲಿಯನ್ನು ಸಹ ಅವರು ಯೋಜಿಸುತ್ತಿರಬಹುದು ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ, ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಲಿಂಗಾಯತ ರ್ಯಾಲಿಯಲ್ಲಿ ಧಾರ್ಮಿಕ ಮುಖಂಡರು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದರು.

ಡಿ ಕೆ ಶಿವಕುಮಾರ್ ಪಾಳಯದಲ್ಲಿ ಏನಾಗುತ್ತಿದೆ?

ಡಿಸಿಎಂ ಡಿ ಕೆ ಶಿವಕುಮಾರ್ ಪಾಳಯ ಕೂಡ ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿದ್ದು, ಬಿಹಾರ ಚುನಾವಣೆಯ ನಂತರ ಸಿಎಂ ಹುದ್ದೆಗೆ ಬೇಡಿಕೆ ಇಟ್ಟರೆ, ಶಿವಕುಮಾರ್ ಅವರನ್ನು ಎದುರಿಸಲು ಸಿಎಂ 'ದಲಿತ ಸಿಎಂ' ಕಾರ್ಡ್ ಬಳಸಬಹುದು ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿಯವರ ಔತಣ ಕೂಟದಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಮತ್ತು ಗುತ್ತಿಗೆದಾರರ ಭ್ರಷ್ಟಾಚಾರದ ಆರೋಪಗಳ ಸುತ್ತ ವಿಷಯಗಳ ಕುರಿತು ಕೇವಲ ಸಾಂದರ್ಭಿಕ ಚರ್ಚೆ ಮಾತ್ರ ಇರಬಹುದು. ರಾಜಕೀಯ ವಿಶ್ಲೇಷಕರ ಪ್ರಕಾರ, ಪ್ರತ್ಯೇಕ ಲಿಂಗಾಯತ ಧರ್ಮದ ಸ್ಥಾನಮಾನದ ವಿಷಯದ ಕುರಿತು ಎಂ.ಬಿ. ಪಾಟೀಲ್, ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಡುವಿನ ಭಿನ್ನಾಭಿಪ್ರಾಯಗಳನ್ನು ಸಿಎಂ ಅವರ ಹಸ್ತಕ್ಷೇಪವು ಕಡಿಮೆ ಮಾಡಲಿದೆ.

ಔತಣಕೂಟ ಮಾಡಲಿ, ತಪ್ಪೇನು?

ಮುಖ್ಯಮಂತ್ರಿಗಳು ಸಹೋದ್ಯೋಗಿಗಳನ್ನು ಡಿನ್ನರ್ ಮೀಟ್ ಗೆ ಕರೆದಿರುವ ಬಗ್ಗೆ ಸುದ್ದಿಗಾರರು ಕೇಳಿದಾಗ ಡಿ ಕೆ ಶಿವಕುಮಾರ್, ಔತಣಕೂಟದಲ್ಲಿ ಏನು ತಪ್ಪಾಗಿದೆ, ಪಕ್ಷದ ನಾಯಕರು ಒಟ್ಟಿಗೆ ಸೇರಿ, ಊಟ ಮಾಡಿ, ವಿಷಯಗಳ ಬಗ್ಗೆ ಚರ್ಚಿಸುವುದು ಸಹಜ ಎಂದು ಹೇಳಿದರು. ಯಾವುದೇ ಸಚಿವ ಸಂಪುಟ ಪುನಾರಚನೆ ಬಗ್ಗೆ ಗೊತ್ತಿಲ್ಲ, ಅದು ಮುಖ್ಯಮಂತ್ರಿಯವರ ವಿಶೇಷ ಹಕ್ಕು ಎಂದು ಅವರು ಸ್ಪಷ್ಟಪಡಿಸಿದರು.

ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ನನ್ನೊಂದಿಗೆ ಚರ್ಚಿಸಿದರೆ ನಾನು ನನ್ನ ಸಲಹೆಯನ್ನು ನೀಡುತ್ತೇನೆ. ಅನಗತ್ಯ ಗೊಂದಲ ಸೃಷ್ಟಿಸದಂತೆ ಮಾಧ್ಯಮಗಳಿಗೆ ನಾನು ಮನವಿ ಮಾಡುತ್ತೇನೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com