
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 13, ಸೋಮವಾರ ತಮ್ಮ ಸಂಪುಟ ಸಹೋದ್ಯೋಗಿಗಳನ್ನು ಔತಣಕೂಟಕ್ಕೆ ಆಹ್ವಾನಿಸಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಸಂಪುಟ ಪುನಾರಚನೆ ಬಗ್ಗೆ ತೀವ್ರ ಉತ್ಸುಕರಾಗಿರುವ ಸಿದ್ದರಾಮಯ್ಯನವರ ಆಪ್ತ ಮತ್ತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಈ ವಿಷಯ ಔತಣಕೂಟ ವೇಳೆ ಚರ್ಚೆಗೆ ಬರಬಹುದು ಎಂದು ಭಾವಿಸಿದ್ದಾರೆ. ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.
ಜಮೀರ್ ಏನೆಂದರು?
ಸಂಪುಟ ಪುನಾರಚನೆ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಆದರೆ ಈ ವಿಷಯವನ್ನು ಪಕ್ಷದ ಹೈಕಮಾಂಡ್‌ಗೆ ಬಿಡಲಾಗಿದೆ. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಸಂಪುಟ ಪುನಾರಚನೆಯಾಗುತ್ತದೆಯೇ ಎಂದು ಗೊತ್ತಿಲ್ಲ. ಸಿಎಂ ಔತಣಕೂಟಕ್ಕೆ ಕರೆದಿದ್ದಾರೆ, ಏನು ಚರ್ಚಿಸಲಾಗುತ್ತದೆ ಎಂದು ಕಾದು ನೋಡೋಣ ಎಂದು ಅವರು ಸುದ್ದಿಗಾರರಿಗೆ ಹೇಳಿದ್ದಾರೆ.
ಸಚಿವ ಮಹದೇವಪ್ಪ ಹೇಳಿದ್ದೇನು?
ಸಮಾಜ ಕಲ್ಯಾಣ ಸಚಿವ ಡಾ. ಹೆಚ್ .ಸಿ. ಮಹದೇವಪ್ಪ ಅವರು, ಸಚಿವರ ಬದಲಾವಣೆಯಾಗಲಿ, ಸಂಪುಟ ಪುನಾರಚನೆಯಾಗಲಿ ಅಥವಾ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸೇರ್ಪಡೆಗೊಳಿಸುವುದಾಗಲಿ, ಯಾವಾಗ ನಿರ್ಧಾರ ತೆಗೆದುಕೊಳ್ಳಬೇಕೆಂದು ಹೈಕಮಾಂಡ್‌ಗೆ ತಿಳಿದಿದೆ ಎಂದು ಹೇಳಿದರು.
ಗೃಹ ಸಚಿವರು, ಸಂತೋಷ್ ಲಾಡ್ ಏನೆಂದರು?
ಸಚಿವರ ಮೌಲ್ಯಮಾಪನ ನಿರಂತರ ಪ್ರಕ್ರಿಯೆಯಾಗಿದ್ದು, ಸಂಪುಟ ಪುನಾರಚನೆಯನ್ನು ಮುಖ್ಯಮಂತ್ರಿಯವರ ಔತಣಕೂಟದ ಜೊತೆ ಹೋಲಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಉಡುಪಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಮುಖ್ಯಮಂತ್ರಿಗಳು ಪ್ರತಿ ವರ್ಷ ಔತಣಕೂಟವನ್ನು ಕರೆಯುತ್ತಾರೆ. ಇದು ಹೊಸದೇನಲ್ಲ. ಕಳೆದ ಬಾರಿಯೂ ಇದನ್ನು ಕರೆಯಲಾಗಿತ್ತು. ಮುಖ್ಯಮಂತ್ರಿಗಳು ವೈಯಕ್ತಿಕವಾಗಿ ಮಾತನಾಡುತ್ತಾರೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಾಮಾನ್ಯ ವಿದ್ಯಮಾನ. ಅದು ಯಾವಾಗ ಆಗಬೇಕೆಂದು ಸಿಎಂ, ಡಿಸಿಎಂ ಮತ್ತು ಹೈಕಮಾಂಡ್ ನಿರ್ಧರಿಸುತ್ತಾರೆ ಎಂದರು.
Advertisement