
ಬಾಗಲಕೋಟೆ: ಪಕ್ಷದ ಶಾಸಕರ ಬೆಂಬಲವಿಲ್ಲದೆ ಮತ್ತು ಕಾಂಗ್ರೆಸ್ ಹೈಕಮಾಂಡ್ ಆಶೀರ್ವಾದವಿಲ್ಲದೆ ಯಾರೂ ಸಿಎಂ ಆಗಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ನವೆಂಬರ್‌ನಲ್ಲಿ ಎರಡೂವರೆ ವರ್ಷ ಪೂರ್ಣಗೊಳಿಸಲಿದ್ದು, ಈ ವೇಳೆ ಮುಖ್ಯಮಂತ್ರಿ ಬದಲಾವಣೆ ಮತ್ತು ಸಚಿವ ಸಂಪುಟ ಪುನರ್ರಚನೆ ಬಗ್ಗೆ ಮಾತುಗಳು ಕೇಳಿಬರುತ್ತಿದ್ದು, ಇದನ್ನು ಕೆಲವರು "ನವೆಂಬರ್ ಕ್ರಾಂತಿ" ಎಂದು ಕರೆಯುತ್ತಿದ್ದಾರೆ.
"ನಾನು ಅಂತಹ ವಿಷಯಗಳಿಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಈ ಹೈಕಮಾಂಡ್ ನಿರ್ಧಾರವೇ ಅಂತಿಮ. ಶಾಸಕರು ಮತ್ತು ಹೈಕಮಾಂಡ್ ಎರಡೂ ಬಹಳ ಮುಖ್ಯ. ಶಾಸಕರ ಬೆಂಬಲವಿಲ್ಲದೆ ಯಾರೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ಶಾಸಕರ ಬೆಂಬಲದ ಜೊತೆಗೆ ಹೈಕಮಾಂಡ್‌ನ ಆಶೀರ್ವಾದವೂ ಅಗತ್ಯ" ಎಂದು ಸಿಎಂ ತಿಳಿಸಿದರು.
ಹೈಕಮಾಂಡ್ ನಿರ್ಧಾರದ ಆಧಾರದ ಮೇಲೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಡೆಯಬಹುದು. ಇದಕ್ಕೆ ಶಾಸಕರ ಬೆಂಬಲದ ಅಗತ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನೀಡಿದ್ದ ಹೇಳಿಕೆಯ ಕುರಿತು ಕೇಳಿದ ಪ್ರಶ್ನೆಗೆ ಸಿಎಂ ಈ ರೀತಿ ಪ್ರತಿಕ್ರಿಯೆ ನೀಡಿದರು.
ನವೆಂಬರ್ ಕ್ರಾಂತಿಯ ಬಗ್ಗೆ ಕೇಳಿದಾಗ, "ಕ್ರಾಂತಿ, ಬ್ರಾಂತಿ ಎಲ್ಲಾ ಇಲ್ಲ. ಎಲ್ಲಾ ಭ್ರಮೆ" ಎಂದು ಹೇಳಿದರು.
ಇನ್ನು ಸಿಎಂ ಆಯ್ಕೆಗೆ ಶಾಸಕರ ಬೆಂಬಲ ಬೇಡ, ಹೈಕಮಾಂಡ್ ತೀರ್ಮಾನ ಸಾಕು ಎಂಬ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ ಅವರು, ನಮ್ಮಲ್ಲಿ ಒಂದು ನಿಯಮ ಇದೆ. ಒಂದು ಪಕ್ಷ ಆಯ್ಕೆ ಆದ ಮೇಲೆ ಸರ್ಕಾರ ಮಾಡುವಾಗ, ಸಿಎಲ್‌ಪಿ ಲೀಡರ್ ಅಂದರೆ ಮುಖ್ಯಮಂತ್ರಿಗಳ ನೇಮಕ ಮಾಡುವಾಗ ಶಾಸಕರ ಅಭಿಪ್ರಾಯ ಕೇಳಲು ಹೈಕಮಾಂಡ್‌ನಿಂದ ವೀಕ್ಷಕರು ಬರುತ್ತಾರೆ. ಅವರು ಶಾಸಕರ ಅಭಿಪ್ರಾಯ ಪಡೆದು, ಅದನ್ನು ಹೈಕಮಾಂಡ್‌ಗೆ ತಿಳಿಸುತ್ತಾರೆ. ಇಂತವರ ಪರ ಇಷ್ಟು ಜನ ಇದ್ದಾರೆ ಎಂದು ಹೇಳುತ್ತಾರೆ. ಯಾರಿಗೆ ಸಿಎಂ ಆಗುವ ಮೆಜಾರಿಟಿ ಬಂದಿದೆ ಎಂದು ಆ ನಂತರ ಹೆಸರು ಘೋಷಣೆ ಮಾಡುತ್ತಾರೆ ಎಂದರು.
ಸಿದ್ದರಾಮಯ್ಯ ಮೊದಲ ಬಾರಿ ಮತ್ತು ಎರಡನೇ ಬಾರಿ ಸಿಎಂ ಆದಾಗಲೂ ಇದೇ ರೀತಿಯ ಪ್ರಕ್ರಿಯೆ ನಡೆದಿದೆ.
ಎಸ್.ಎಂ.ಕೃಷ್ಣ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದಾಗಲೂ ಅದೇ ಪ್ರಕ್ರಿಯೆಯನ್ನು ಅನುಸರಿಸಲಾಯಿತು ಎಂದು ಪರಮೇಶ್ವರು ಅವರು ತಿಳಿಸಿದರು.
"ಆದರೆ, ಶಾಸಕರ ಅಭಿಪ್ರಾಯ ಅಗತ್ಯವಿಲ್ಲ ಎಂದು ಹೈಕಮಾಂಡ್ ಹೇಳಿದರೆ, ಅದು ಅವರಿಗೆ ಬಿಟ್ಟ ವಿಚಾರ. ಅದು ಅವರ ನಿರ್ಧಾರ. ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ" ಎಂದು ಅವರು ಹೇಳಿದರು.
Advertisement