
ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ. ಅವರು ನಮ್ಮ ದೊಡ್ಡ ನಾಯಕರು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್
ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ರಾಜ್ಯ ರಾಜಕಾರಣಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮರಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ವಿಷಯವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ. ಪರಮೇಶ್ವರ್, ಖರ್ಗೆ ರಾಜ್ಯ ರಾಜಕಾರಣಕ್ಕೆ ಬರುವುದಾದರೇ ಸ್ವಾಗತ ಅವರು ನಮ್ಮ ಹಿರಿಯ ನಾಯಕರು ಎಂದು ಹೇಳಿದ್ದಾರೆ.
ಒಂದು ವೇಳೆ ಸಿಎಂ ಬದಲಾವಣೆಯಾದರೆ ಆ ಸಂಭಾವ್ಯ ವ್ಯಕ್ತಿ ಯಾರು ಎಂಬ ಬಗ್ಗೆ ಮಾತನಾಡಲು ನಾನು ಸಮರ್ಥನಲ್ಲ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ. ವಿಶೇಷವಾಗಿ ಖರ್ಗೆ ಅವರು ಕರ್ನಾಟಕಕ್ಕೆ ಬರಲು ಬಯಸಿದರೆ, ಅವರಿಗೆ ಸ್ವಾಗತ ಎಂದಿದ್ದಾರೆ.
ಸೋಮವಾರದಂದು ಸಿದ್ದರಾಮಯ್ಯ ಅವರು ತಮ್ಮ ಎಲ್ಲಾ ಸಂಪುಟ ಸಹೋದ್ಯೋಗಿಗಳಿಗೆ ಭೋಜನಕೂಟವನ್ನು ಆಯೋಜಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಎರಡೂವರೆ ವರ್ಷಗಳು ಪೂರ್ಣಗೊಳ್ಳುವ ವಾರಗಳ ಮೊದಲು ಈ ಸಭೆ ನಡೆಯಿತು.
ರಾಜ್ಯದಲ್ಲಿ ಸಚಿವ ಸಂಪುಟ ಪುನರ್ರಚನೆ ನಡೆಯಲಿದೆ ಎಂಬ ಊಹಾಪೋಹ ಕೇಳಿ ಬರುತ್ತಿವೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಜಿಲ್ಲಾ ಪಂಚಾಯತ್ (ಜಿಪಂ) ಮತ್ತು ತಾಲ್ಲೂಕು ಪಂಚಾಯತ್ (ತಾಪಂ) ಚುನಾವಣೆಗಳ ಬಗ್ಗೆ ಚರ್ಚಿಸಲು ಭೋಜನ ಕೂಟ ಆಯೋಜಿಸಲಾಗಿತ್ತು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸಚಿವರ ಕಾರ್ಯಕ್ಷಮತೆಯ ಬಗ್ಗೆ ಚರ್ಚಿಸಲಾಗಿದೆಯೇ ಎಂದು ಕೇಳಿದಾಗ, ಸಭೆಯಲ್ಲಿ ಅಂತಹ ಯಾವುದೇ ಮೌಲ್ಯಮಾಪನವನ್ನು ನಡೆಸಲಾಗಿಲ್ಲ ಎಂದು ಅವರು ಹೇಳಿದರು. ಸಭೆಯ ಪ್ರಮುಖ ಅಜೆಂಡಾ ಚುನಾವಣೆಗಳಾಗಿತ್ತು ಎಂದು ರಾಮಲಿಂಗಾ ರೆಡ್ಡಿ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ರಾಜ್ಯದಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ನಂತರ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಸಿಎಂ ಹುದ್ದೆಗೆ ಸ್ಪರ್ಧಿಗಳಾಗಿದ್ದರು. ಹಲವು ಸುತ್ತಿನ ಚರ್ಚೆಯ ನಂತರ, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಿತು. ಆ ಸಮಯದಲ್ಲಿ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಸಿಎಂ ಹುದ್ದೆಯ ಸರದಿಯ ನಂತರ ನಿರ್ಧಾರಕ್ಕೆ ಶಿವಕುಮಾರ್ ಒಪ್ಪಿಕೊಂಡರು ಎಂದು ವರದಿಯಾಗಿತ್ತು. ಆದರೆ, ಕಾಂಗ್ರೆಸ್ ಕೇಂದ್ರ ನಾಯಕತ್ವವು ಅಂತಹ ಒಪ್ಪಂದ ಅಸ್ತಿತ್ವದಲ್ಲಿದೆ ಎಂದು ಎಂದಿಗೂ ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ.
ಈ ವಿಷಯದ ಕುರಿತು ಯಾವುದೇ ಹೇಳಿಕೆಗಳನ್ನು ನೀಡದಂತೆ ನೋಟಿಸ್ ನೀಡುವ ಮೂಲಕ ಕಾಂಗ್ರೆಸ್ ಹೈ ಕಮಾಂಡ್ ಶಿವಕುಮಾರ್ ಅವರ ಬೆಂಬಲಿಗರ ಹೇಳಿಕೆಗಳನ್ನು ನಿರಾಕರಿಸಿದೆ. ಇದಲ್ಲದೆ, ಕರ್ನಾಟಕದ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಕೂಡ ಈ ಊಹಾಪೋಹವನ್ನು ಆಧಾರರಹಿತ ಎಂದು ತಳ್ಳಿಹಾಕಿದ್ದಾರೆ.
Advertisement