ಸಾರ್ವಜನಿಕ ಸ್ಥಳಗಳಲ್ಲಿ ನಮಾಜ್ ನಿಷೇಧಿಸಿ: ಸಿಎಂ ಸಿದ್ದರಾಮಯ್ಯಗೆ ಯತ್ನಾಳ್ ಪತ್ರ
ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ ಎಸ್ಎಸ್)ದ ಚಟುವಟಿಕೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ, ಸರ್ಕಾರಿ ಸ್ಥಳಗಳಲ್ಲಿ, ಸರ್ಕಾರಿ, ಅನುದಾನಿತ ಶಾಲೆಗಳ ಆವರಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಕಾರ್ಯಕ್ರಮಕ್ಕೆ ಕಡ್ಡಾಯ ಅನುಮತಿ ಪಡೆಯಬೇಕು ಎಂದು ಹೇಳಿದೆ.
ಇದರ ಬೆನ್ನಲ್ಲೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಸರ್ಕಾರದ ಅನುಮತಿಯಿಲ್ಲದೆ, ಸಾರ್ವಜನಿಕ ರಸ್ತೆ ಹಾಗೂ ಸರ್ಕಾರಿ ಆವರಣಗಳಲ್ಲಿ ನಮಾಜ್ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಯಾವುದೇ ಅನುಮತಿಯಿಲ್ಲದೆ ರಸ್ತೆ ಹಾಗೂ ಸರ್ಕಾರಿ ಆವರಣಗಳಲ್ಲಿ ನಮಾಜ್ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಇಂತಹ ಚಟುವಟಿಕೆಗಳಿಂದ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಅಡಚಣೆ ಉಂಟಾಗುತ್ತಿದೆ. ಇದು ಭಾರತೀಯ ಸಂವಿಧಾನದ ಕಲಂ 19 ಮತ್ತು 21ರ ಅಡಿಯಲ್ಲಿ ಖಾತರಿಯಾದ ಮುಕ್ತ ಸಂಚಾರ ಹಾಗೂ ಭದ್ರತೆ ಎಂಬ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಹೀಗಾಗಿ ಸರ್ಕಾರಿ ಕಚೇರಿಗಳು ಅಥವಾ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ನಮಾಜ್ ಮಾಡಲು ಅನುಮತಿ ನೀಡಬಾರದು ಎಂದು ಯತ್ನಾಳ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಪೂರ್ವ ಅನುಮತಿಯಿಲ್ಲದೆ ರಸ್ತೆಯಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಅಥವಾ ಸರ್ಕಾರಿ ಆವರಣದಲ್ಲಿ ನಮಾಜ್ ಮಾಡದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಯತ್ನಾಳ್ ಮನವಿ ಮಾಡಿದ್ದಾರೆ.
ಕರ್ನಾಟಕ ಪೊಲೀಸ್ ಕಾಯ್ದೆ ಮತ್ತು ಸಂಬಂಧಿತ ಸಂಚಾರ ನಿಯಮಾವಳಿಗಳ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳನ್ನು ಧಾರ್ಮಿಕ ಉದ್ದೇಶಗಳಿಗೆ ಅನಧಿಕೃತವಾಗಿ ಬಳಸುವುದನ್ನು ತಡೆಗಟ್ಟಲು ಸ್ಪಷ್ಟವಾದ SOPಯನ್ನು ಸರ್ಕಾರ ರೂಪಿಸಬೇಕು. ಆ ಮೂಲಕ ಧರ್ಮನಿರಪೇಕ್ಷತೆ, ಕಾನೂನಿನ ಸಮಾನತೆ ಮತ್ತು ಸಾರ್ವಜನಿಕ ಶಿಸ್ತಿನ ಬಗ್ಗೆ ತನ್ನ ಬದ್ಧತೆಯನ್ನು ದೃಢಪಡಿಸಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ