
ಹಾಸನ: ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ನಿರ್ಲಕ್ಷ್ಯ ವಹಿಸಿದೆ, ಈ ಸರ್ಕಾರ ಆಕಾಶದಲ್ಲಿ ತೇಲುತ್ತಿದೆ. ದುರಹಂಕಾರದಿಂದ ಕೆಳಗೆ ಇಳಿದು ಜನರ ಮಧ್ಯ ಓಡಾಡಿ ಅವರ ಕಷ್ಟ ಅರಿತುಕೊಳ್ಳಲಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಹಾಸನಾಂಬ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಸರ್ಕಾರವು ಸಾಮಾನ್ಯ ಜನರು ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸುವ ಬದಲು ರಾಜಕೀಯಕ್ಕೆ ಪ್ರಾಮುಖ್ಯತೆ ನೀಡುತ್ತಿದೆ ಎಂದು ಅವರು ಹೇಳಿದರು.
ಜನರ ಗಮನವನ್ನು ಬೇರೆಡೆ ಸೆಳೆಯಲು ಸಚಿವರು ಅನಗತ್ಯ ಮತ್ತು ಆತುರದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಐಟಿ-ಬಿಟಿ ಸಚಿವರು (ಪ್ರಿಯಾಂಕ್ ಖರ್ಗೆ) ರಾಜಕೀಯ ಲಾಭಕ್ಕಾಗಿ ಮತ್ತು ರಾಜ್ಯದಲ್ಲಿ ಮತಬ್ಯಾಂಕ್ ಬಲಪಡಿಸಲು ಆರ್‌ಎಸ್‌ಎಸ್ ಸಂಘಟನೆಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ನಾನು ಸಿಎಂ ಆಗಿದ್ದಾಗ ನನಗೆ ಸಿಕ್ಕ ಅವಧಿಯಲ್ಲಿ ಜನರ ಸಹಾಯಕ್ಕಾಗಿ ಕೆಲಸ ಮಾಡಿದ್ದೆ. ಈಗಿನ ಆಡಳಿತ ಜನರ ಕಷ್ಟವನ್ನೇ ಮರೆತಿದೆ. ಸಿದ್ದರಾಮಯ್ಯ ಅವರು ನನ್ನ ಆಡಳಿತದೊಂದಿಗೆ ಹೋಲಿಕೆ ಮಾಡಬಾರದು. ಅವರು ಬಯಸಿದರೆ ಬಹಿರಂಗ ಚರ್ಚೆಗೆ ನಾನು ಸಿದ್ಧ ಎಂದು ಸವಾಲು ಹಾಕಿದರು. ರಾಜ್ಯ ಸರ್ಕಾರದ ನಡೆ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಎಷ್ಟು ಮಂತ್ರಿಗಳು ತಮ್ಮ ಕ್ಷೇತ್ರಕ್ಕೆ ಹೋಗಿ ಜನರ ಸಮಸ್ಯೆ ಕೇಳಿದ್ದಾರೆ. ಜನರ ಜೊತೆ ಸಂಪರ್ಕ ಕಳೆದುಕೊಂಡ ಸರ್ಕಾರ ಹೆಚ್ಚು ದಿನ ಇರಲಾರದು ಎಂದು ಎಚ್ಚರಿಸಿದರು.
ಪ್ರಮುಖ ಯೋಜನೆಗಳಿಗೆ ಅನೇಕ ಇಲಾಖೆಗಳು ಹೊಂದಾಣಿಕೆಯ ಅನುದಾನವನ್ನು ಬಿಡುಗಡೆ ಮಾಡದ ಕಾರಣ ಕೇಂದ್ರವನ್ನು ದೂಷಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಅವರು ಹೇಳಿದರು. ಕೇಂದ್ರದಿಂದ ಹಂಚಿಕೆಯಾದ ಕೋಟ್ಯಂತರ ರೂಪಾಯಿಗಳನ್ನು ವಿವಿಧ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರು ಶೇ.40 ರಷ್ಟು ಕಮಿಷನ್ ಪಾವತಿಸುತ್ತಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ, ಆದರೆ ಅದರ ಈಗ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ, ಗುತ್ತಿಗೆದಾರರ ಕಮಿಷನ್ ಶೇ.60 ಕ್ಕೆ ಏರಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಕುಮಾರಸ್ವಾಮಿ ತಮ್ಮ ಪತ್ನಿ ಅನಿತಾ, ಮಗ ನಿಖಿಲ್ , ಸೊಸೆ ಮತ್ತು ಮೊಮ್ಮಗನೊಂದಿಗೆ ಹಾಸನಾಂಬ ದೇವಸ್ಥಾನಕ್ಕೆ ಭೇಟಿ ನೀಡಿದರು. ಹಾಸನ ಬಳಿಯ ರೆಸಾರ್ಟ್‌ನಲ್ಲಿ ಪಕ್ಷದ ನಾಯಕರ ಸಭೆಯನ್ನೂ ನಡೆಸಿದರು.
Advertisement