
ಬೆಂಗಳೂರು: ಚುನಾವಣೆಗೆ ಹಣ ಸಂಗ್ರಹಣೆ, ಕಪ್ಪ ಕಾಣಿಕೆ ರವಾನೆ ವಿಚಾರದಲ್ಲಿ ರಾಜ್ಯ ರಾಜಕೀಯ ನಾಯಕರು ಪರಸ್ಪರ ಆರೋಪ -ಪ್ರತ್ಯಾರೋಪ ಮಾಡುತ್ತಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕಾಣಿಕೆ ಕೊಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ನಾಯಕರು ಸರ್ಕಾರ ವಿರುದ್ಧ ಆರೋಪ ಮಾಡಿದ್ದಾರೆ.
ಪ್ರಿಯಾಂಕ್ ಖರ್ಗೆ ಟಾಂಗ್
ಇದಕ್ಕೆ ತಿರುಗೇಟು ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಹಂಚಿಕೊಂಡಿದ್ದರು. ಅದು ಯಡಿಯೂರಪ್ಪ ಮತ್ತು ದಿವಂಗತ ಅನಂತ್‌ಕುಮಾರ್ ನಡುವಿನ ಸಂಭಾಷಣೆಯ ಹಳೆ ವಿಡಿಯೋ.
2017ರ ಫೆಬ್ರವರಿ 13ರಂದು ಚುನಾವಣೆಗೆ ಒಂದು ವರ್ಷವಿದ್ದಾಗ ಗುಸುಗುಸು ಮಾತನಾಡಿದ್ದು, ನೀವು ಕೊಟ್ಟಿರ್ತೀರಿ, ನಾವು ಕೊಟ್ಟಿರ್ತೀರಿ ಅದನ್ನ ಯಾರಾದ್ರೂ ಬರೆದುಕೊಳ್ತಾರಾ ಅಂದಿದ್ರು. ಈ ಹಳೆ ವಿಡಿಯೋ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಕೇಳಿಸಿಕೊಳ್ಳಿ ಬಿಜೆಪಿಯವರೇ. ಹೈಕಮಾಂಡ್‌ಗೆ ನೀವು ಕಪ್ಪ ನೀಡಿದ್ದನ್ನು ಮರೆತುಬಿಟ್ರಾ ಎಂದು ಪ್ರಶ್ನೆ ಮಾಡಿದ್ದರು.
ಅನಂತ್ ಕುಮಾರ್ ಪುತ್ರಿ ಪ್ರಶ್ನೆ, ಸಿಟ್ಟು
ಇದಕ್ಕೆ ದಿವಂಗತ ಅನಂತ್ ಕುಮಾರ್ ಪುತ್ರಿ ಐಶ್ವರ್ಯ ಅನಂತ್ ಕುಮಾರ್ ಅವರು ಸಿಟ್ಟಿನಿಂದ ಕೆರಳಿ ಪ್ರಿಯಾಂಕ್ ಖರ್ಗೆಯವರಿಗೆ ಪ್ರಶ್ನೆ ಮಾಡಿದ್ದಾರೆ. ಲಂಚದ ಡೈರಿ ವಿಚಾರ ಪ್ರಸ್ತಾಪಿಸಿ ಟ್ವೀಟ್‌ನಲ್ಲೇ ಟಾಂಗ್ ಕೊಟ್ಟಿದ್ದಾರೆ. ಪ್ರಿಯಾಂಕ್ ಖರ್ಗೆ ಅವರೇ ಆರ್‌ಎಸ್‌ಎಸ್ ತೆಗಳುವ ನಿಮ್ಮ ವಿಫಲ ಯತ್ನದ ನಂತರ ಈಗ ನೀವು ಕರ್ನಾಟಕಕ್ಕಾಗಿ ಕೆಲಸ ಮಾಡಿದ್ದ, ನಿಮ್ಮ ಪಕ್ಷದವರೇ ಮೆಚ್ಚುತ್ತಿದ್ದ ಅನಂತಕುಮಾರ್ ಅವರ ಹಿಂದೆ ಬೀಳಲು ನಿರ್ಧರಿಸಿದ್ದೀರಿ. ಒಂದು ವೇಳೆ ನೀವು ಮರೆತಿದ್ದರೆ ನಾನು ನಿಮಗೆ ನೆನಪಿಸುತ್ತೇನೆ.
ನಿಮ್ಮ ಪಕ್ಷದ ಹೈಕಮಾಂಡ್ ಕುರಿತ ಅಕ್ಷರಗಳು ಮತ್ತು ಅವರಿಗೆ ನೀಡಲಾದ ಭಾರೀ ಮೊತ್ತದ ಲಂಚದ ಕುರಿತ ಕಾಂಗ್ರೆಸ್ ಮುಖ್ಯಮಂತ್ರಿಯ ಕುಖ್ಯಾತ ಡೈರಿ ಬಗ್ಗೆ ಮಾತನಾಡಿದ್ದ ವಿಡಿಯೊ ಇದು. ಸತ್ಯ ಯಾವತ್ತೂ ಬಹಿರಂಗವಾಗುವ ಗುಣ ಹೊಂದಿದೆ ಎಂಬುದು ನೆನಪಿರಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
Advertisement