

ರಾಯಚೂರು: ನೂರು ವರ್ಷಗಳ ಹಿಂದೆ ಮಹಾತ್ಮ ಗಾಂಧಿ ಅವರು ಕೂತ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಇಂದು ಕೂತಿದ್ದಾರೆ. ಅವರು ಈ ಭಾಗಕ್ಕೆ ಆರ್ಟಿಕಲ್ 371ಜೆ ಕೊಟ್ಟರು. ಅಡ್ವಾಣಿ ಅವರು ಇದು ಸಾಧ್ಯವಿಲ್ಲ ಎಂದು ಹೇಳಿದ್ದನ್ನು ಖರ್ಗೆ ಅವರು ಮಾಡಿ ತೋರಿಸಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಯೋಜನೆಗಳು ಕೇವಲ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರವಲ್ಲ, ಎಲ್ಲಾ ಪಕ್ಷದವರಿಗೂ ತಲುಪುತ್ತಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತಿ ವರ್ಷ ಹೆಚ್ಚುವರಿಯಾಗಿ 5 ಸಾವಿರ ಕೋಟಿ ಅನುದಾನ ನೀಡಲಾಗುತ್ತಿದೆ" ಎಂದು ತಿಳಿಸಿದರು.
ನೀರಾವರಿ ಯೋಜನೆ ಮೂಲಕ ನಿಮಗೆ ಸಹಾಯ ಮಾಡಲು ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಅದಕ್ಕೆ ಪ್ರತಿ ವರ್ಷ 20 ಸಾವಿರ ಕೋಟಿ ನೀಡುತ್ತಿದ್ದೇವೆ. 53 ಸಾವಿರ ಕೋಟಿ ಗ್ಯಾರಂಟಿ ಯೋಜನೆಗೆ ವೆಚ್ಚ ಮಾಡಿದ್ದೇವೆ. ಇನ್ನು ಬೇರೆ ಇಲಾಖೆಗಳ ಕಲ್ಯಾಣ ಯೋಜನೆಗಳು ಸೇರಿಸಿದರೆ ಪ್ರತಿ ವರ್ಷ ನಮ್ಮ ಸರ್ಕಾರ 1 ಲಕ್ಷ ಕೋಟಿ ಹಣವನ್ನು ಜನರ ಜೇಬಿಗೆ ಹಾಕುತ್ತಿದೆ. ಆ ಮೂಲಕ ನಿಮಗೆ ಸರ್ಕಾರ ಶಕ್ತಿ ನೀಡಿದೆ.
ಕಾಂಗ್ರೆಸ್ ಸರ್ಕಾರ ಇದ್ದಾಗ ಬ್ಯಾಂಕ್ ರಾಷ್ಟ್ರೀಕರಣ, ಆಹಾರ ಭದ್ರತಾ ಕಾಯ್ದೆ, ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ, ಪಿಂಚಣಿ ವ್ಯವಸ್ಥೆ, ನರೇಗಾ ನೀಡಿದೆವು. ಇಂತಹ ಒಂದು ಯೋಜನೆ ಬಿಜೆಪಿ ಆವರು ನೀಡಿದ್ದಾರಾ? ಬಡವರಿಗೆ ಸಹಾಯ ಮಾಡುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ" ಎಂದು ತಿಳಿಸಿದರು.
ಕಳೆದ ವರ್ಷ ಟಿಬಿ ಆಣೆಕಟ್ಟು ಗೇಟ್ ಮುರಿದಾಗ ವಿರೋಧ ಪಕ್ಷಗಳ ನಾಯಕರು ಟೀಕೆ ಮಾಡಿದರು. ನಾವು ಒಂದೇ ವಾರದಲ್ಲಿ ಹಗಲಿರುಳು ಶ್ರಮಿಸಿ ಗೇಟ್ ದುರಸ್ಥಿ ಮಾಡಿದೆವು. ಈಗ ಎಲ್ಲಾ ಗೇಟ್ ಗಳ ಬದಲಾವಣೆಗೆ ಆದೇಶ ನೀಡಿದ್ದೇವೆ. ಈ ಆಣೆಕಟ್ಟು ವಿಚಾರವಾಗಿ ಆಂಧ್ರ ಸಿಎಂ ಜೊತೆ ಚರ್ಚೆ ಮಾಡಲು ಮೂರು ಬಾರಿ ಪ್ರಯತ್ನ ಮಾಡಿದೆ.
ಆದರೆ ಅವರು ಸಮಯ ನೀಡಲಿಲ್ಲ. ಈ ಅಣೆಕಟ್ಟಿನಲ್ಲಿ ಹೂಳು ತುಂಬಿರುವ ಪರಿಣಾಮ 30 ಟಿಎಂಸಿ ನೀರು ವ್ಯರ್ಥವಾಗುತ್ತಿದೆ. ಇದನ್ನು ಬಳಸಿಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಆಂಧ್ರ ಪ್ರದೇಶ ಸಹಕಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕರ್ತರಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇರಬಾರದು. ನೀವೆಲ್ಲರೂ ಒಗ್ಗಟ್ಟಿನಿಂದ ಸಂಘಟನೆ ಮಾಡಬೇಕು. ಯಾವ ಗುಂಪು ಇರಬಾರದು. ಇಲ್ಲಿ ಕೇವಲ ಒಂದೇ ಗುಂಪು ಅದು ಕಾಂಗ್ರೆಸ್ ಗುಂಪು. ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಇರಬೇಕು. 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಅದಕ್ಕೆ ನೀವು ಸಿದ್ಧತೆ ಮಾಡಿಕೊಳ್ಳಬೇಕು. ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಅನೇಕ ಜನರು ಪ್ರಯತ್ನಿಸುತ್ತಿದ್ದಾರೆ. ಹಳ್ಳಿಗಳಲ್ಲೂ ಪಕ್ಷ ಸೇರಲು ಜನ ಮುಂದೆ ಬರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ, ನಾಯಕತ್ವದ ಮೇಲೆ ನಂಬಿಕೆ ಇಟ್ಟು ಬರುವ ಎಲ್ಲರನ್ನು ಸೇರಿಸಿಕೊಳ್ಳಿ" ಎಂದು ಹೇಳಿದರು.
ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಮಾಡಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಿಲ್ಲ. ರಾಹುಲ್ ಗಾಂಧಿ ನಮಗೆ ಅಷ್ಟು ಶಕ್ತಿ ನೀಡಿದ್ದಾರೆ. ಸೋನಿಯಾ ಗಾಂಧಿ ಆವರು ಎರಡು ಬಾರಿ ಪ್ರಧಾನಮಂತ್ರಿ ಹುದ್ದೆ ತ್ಯಾಗ ಮಾಡಿದ್ದಾರೆ. ಈ ದೇಶಕ್ಕೆ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಬೇಕು ಎಂದರು. ನಿಮ್ಮಲ್ಲಿ ಯಾರಾದರೂ ಪಂಚಾಯ್ತಿ ಸೀಟು ಬಿಟ್ಟುಕೊಡುತ್ತೀರಾ?" ಎಂದು ಪ್ರಶ್ನಿಸಿದರು.
Advertisement