
ರಾಮನಗರ: ಮುಖ್ಯಮಂತ್ರಿ ಬದಲಾವಣೆ ವಿಚಾರ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವಂತೆಯೇ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ವಿರುದ್ಧ ಶಾಸಕ ಇಕ್ಬಾಲ್ ಹುಸೇನ್ ಕಿಡಿಕಾರಿದ್ದಾರೆ.
ನಮ್ಮ ತಂದೆ ರಾಜಕೀಯದ ಕೊನೆಗಾಲದಲ್ಲಿದ್ದು, ಪ್ರಗತಿಪರ ಚಿಂತನೆ ಹೊಂದಿರುವ ನಾಯಕನ ಅಗತ್ಯವಿದೆ. ಸಚಿವ ಸತೀಶ್ ಜಾರಕಿಹೊಳಿ ಆ ಜವಾಬ್ದಾರಿ ತೆಗೆದುಕೊಳ್ಳಲು ಸಮರ್ಥರು ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಎಚ್. ಎ. ಇಕ್ಬಾಲ್ ಹುಸೇನ್, ಸಿಎಂ ಬದಲಾವಣೆ ವಿಚಾರ ಕುರಿತು ನಾವೇನಾದರೂ ಹೇಳಿಕೆ ಕೊಟ್ಟರೆ ನೋಟಿಸ್ ಕೊಟ್ತಾರೆ. ಅಂದ್ರೆ ನಾವು ಮಾಡಿದ್ರೆ, ಬಲತ್ಕಾರ, ಬೇರೆಯವರು ಮಾಡಿದ್ರೆ ಚಮತ್ಕಾರ ಅನ್ನುವ ಪರಿಸ್ಥಿತಿ ಇದೆ ಎಂದರು.
ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಎಳಸುತದಿಂದ ಕೂಡಿದೆ. ಅವರ ಮಾತಿನ್ನೂ ಬಲಿತಿಲ್ಲ. ಜೊತೆಗೆ ಶಕ್ತಿಯೂ ಇಲ್ಲ. ಅವರು ಪರಿಷತ್ ಸದಸ್ಯರೇ ಹೊರತು ವಿಧಾನಸಭಾ ಸದಸ್ಯರಲ್ಲ. ಅವರು ತಮ್ಮ ಇತಿ ಮಿತಿಗಳನ್ನು ಅರಿತು ಗೌರವಯುತ ಹೇಳಿಕೆ ನೀಡಬೇಕು. ಸಿಎಂ ಬದಲಾವಣೆ ವಿಚಾರದಲ್ಲಿ ಯಾವುದೇ ಗೊಂದಲ ಸೃಷ್ಟಿಸಬಾರದು ಎಂದು ಹೇಳಿದರು.
ಸಿಎಂ ಸ್ಥಾನಕ್ಕಾಗಿ ಡಿಸಿಎಂ ಡಿಕೆ ಶಿವಕುಮಾರ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಇಕ್ಬಾಲ್ ಹುಸೇನ್, ಅವ್ರು ಪಕ್ಷದ ಅಧ್ಯಕ್ಷರು, ಜವಾಬ್ದಾರಿಯುತ ಸ್ಥಾನದಲ್ಲಿದ್ದು ಕೆಲಸ ಮಾಡುತ್ತಿದ್ದಾರೆ. ಪಕ್ಷ ಸಂಘಟನೆಗೆ ಹೆಚ್ಚು ಶ್ರಮ ಹಾಕುತ್ತಿದ್ದಾರೆ.ನಮಗೆಲ್ಲ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಯೂತ್ ಕಾಂಗ್ರೆಸ್‌ನಿಂದ ಬಂದು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಯಾರೂ ಗೊಂದಲದ ಹೇಳಿಕೆ ಕೊಡಬಾರದು. ಅದನ್ನು ಅವರು ತಿದ್ದಿಕೊಳ್ತಾರೆ ಎಂಬ ವಿಶ್ವಾಸವಿದೆ ಎಂದು ಯತೀಂದ್ರ ಹೇಳಿಕೆ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.
Advertisement