

ದಾವಣಗೆರೆ: ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯಾದ್ಯಂತ ನಡೆಸುತ್ತಿರುವ ದೇವಸ್ಥಾನಗಳ ಭೇಟಿ (ಟೆಂಪಲ್ ರನ್) ಬಿಟ್ಟು, ಇಟಲಿ ಮಾತೆಯ ಟೆಂಪಲ್ ಸುತ್ತಿದರೆ ಮುಖ್ಯಮಂತ್ರಿ ಆಗುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಗುರುವಾರ ಮಾತನಾಡಿದ ಅವರು, ಡಿಸಿಎಂ ಡಿ.ಕೆ. ಶಿವಕುಮಾರ್ ದಾರಿ ತಪ್ಪಿದ ಮಗ. ಅವರು ಚಾಮುಂಡಿ, ಮಾರಮ್ಮ, ಗೌರಮ್ಮ, ರಾಘವೇಂದ್ರ ಸ್ವಾಮಿ ಎಂದು ಟೆಂಪಲ್ ರನ್ ಮಾಡುವುದರಿಂದ ಏನೂ ಪ್ರಯೋಜನವಿಲ್ಲ.
ಈ ಟೆಂಪಲ್‌ಗಳಿಗಿಂತ ದೊಡ್ಡ ಟೆಂಪಲ್ ಇಟಲಿ ಟೆಂಪಲ್ ಇದೆ. ಆ ಟೆಂಪಲ್ ಸುತ್ತಬೇಕು. ಅಲ್ಲಿ ಸರಿಯಾದ ಕಪ್ಪ ಕಾಣಿಕೆ ಕೊಟ್ಟು, ದೇವರನ್ನು ಪ್ರದಕ್ಷಿಣೆ ಹಾಕಿದರೆ ಮಾತ್ರ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ನಾಯಕತ್ವ ವಿಚಾರವಾಗಿ ಯತೀಂದ್ರ ಸಿದ್ದರಾಮಯ್ಯ ಆಡಿರುವ ಮಾತು ಡಿ.ಕೆ ಶಿವಕುಮಾರ್ ರನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ಕರ್ನಾಟಕದಲ್ಲಿ ನವೆಂಬರ್ ಕ್ರಾಂತಿ ಆಗಿತ್ತೆ ಎಂದು ನಾವು ಹೇಳಿದ್ದಕ್ಕೆ, ಕಾಂಗ್ರೆಸ್ ನಾಯಕರು ಕ್ರಾಂತಿನೂ ಇಲ್ಲ ಭ್ರಾಂತಿನೂ ಇಲ್ಲ ಎನ್ನುತ್ತಿದ್ದರು. ಆದರೆ ಹೀಗ್ಯಾಕೆ ಈ ರೀತಿ ಮಾತಾಡಿದ್ದಾರೆ ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಅಷ್ಟಲ್ಲದೇ ಯತೀಂದ್ರ ಸಿದ್ದರಾಮಯ್ಯ ತಮ್ಮ ಮಾತಿನ ಮೂಲಕ ಬೆಳಗಾವಿಯಿಂದಲೇ ಸರ್ಕಾರ ಬೀಳುವುದಕ್ಕೆ ಗುದ್ದಲಿ ಪೂಜೆ ಮಾಡಿದ್ದಾರೆ ಎಂದು ಆರ್.ಅಶೋಕ್ ಭವಿಷ್ಯ ನುಡಿದಿದ್ದಾರೆ. ಇತ್ತೀಚೆಗೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ನೀಡಿದ್ದ ನವೆಂಬರ್ ಕ್ರಾಂತಿ ಹೇಳಿಕೆ ಕುರಿತು ಮಾತನಾಡಿದ ಅಶೋಕ್, 'ಯತೀಂದ್ರ ಈ ವಿಚಾರ ಹೇಳಿದಾಗ ಕಾಂಗ್ರೆಸ್‌ನವರಿಗೆ ಸರಿ ಇರುತ್ತದೆ.
ಆದರೆ, ರಾಜಣ್ಣ ಹೇಳಿದಾಗ ಅವರನ್ನು ಓಡಿಸಿಬಿಟ್ಟರು. ಈ ಹೇಳಿಕೆ ಸಿದ್ದರಾಮಯ್ಯನವರೇ ಹೇಳಿ ಮಾಡಿಸಿರುವುದು. ಬೆಳಗಾವಿಗೆ ಹೋಗಿ ಯತೀಂದ್ರ ಅವರ ಮನೆಯಲ್ಲೇ ಹೇಳಿದ್ದಾರೆ ಎಂದರೆ, ಡಿ.ಕೆ. ಶಿವಕುಮಾರ್ ಅವರಿಗೆ 'ಪಂಗನಾಮ' (ವಂಚನೆ) ಪಕ್ಕಾ. ಕಾಂಗ್ರೆಸ್ ಒಂದು ಒಡೆದ ಮನೆಯಾಗಿದೆ ಎಂದು ಹೇಳಿದರು.
Advertisement