

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಮಾತನಾಡಬೇಕಾದ ವ್ಯಕ್ತಿಯೊಂದಿಗೆ ಮಾತನಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಶುಕ್ರವಾರ ಅವರು ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ತಂದೆಯಂತೆಯೇ ಪ್ರಗತಿಪರ ಸೈದ್ಧಾಂತಿಕ ಚಿಂತನೆಯನ್ನು ಹೊಂದಿರುವ ನಾಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಯತೀಂದ್ರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, "ನಾನು ಈಗ ಮಾತನಾಡುವುದಿಲ್ಲ, ಆದರೆ ಯಾರತ್ರ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ" ಎಂದು ಸುದ್ದಿಗಾರರಿಗೆ ತಿಳಿಸಿದರು.
ನಾಯಕತ್ವ ಬದಲಾವಣೆಯ ಬಗ್ಗೆ ಮಾತನಾಡುತ್ತಿದ್ದ ಯತೀಂದ್ರ ಅವರಿಗೆ ನೋಟಿಸ್ ಏಕೆ ನೀಡುತ್ತಿಲ್ಲ ಎಂದು ಕೇಳಿದ ವರದಿಗಾರರ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಬುಧವಾರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಎಂಎಲ್‌ಸಿ ಯತೀಂದ್ರ ಅವರು, "ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದಾರೆ. ಇಂತಹ ಸಮಯದಲ್ಲಿ, ಪ್ರಗತಿಪರ ಚಿಂತನೆ ಹೊಂದಿರುವವರಿಗೆ, ಸೈದ್ಧಾಂತಿಕವಾಗಿ ಮಾರ್ಗದರ್ಶನ ನೀಡಲು ಮತ್ತು ಮುನ್ನಡೆಸಲು ಒಬ್ಬ ನಾಯಕನ ಅಗತ್ಯವಿದೆ" ಎಂದು ಹೇಳಿದ್ದರು.
ಯತೀಂದ್ರ ಹೇಳಿಕೆ ಬಗ್ಗೆ ಡಿಸಿಎಂ ಡಿಕೆಶಿ ಆಪ್ತ ಶಾಸಕರು ಅಸಮಾಧಾನ ಹೊರಹಾಕಿದ್ದು, ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಸಿಎಂ ಬದಲಾವಣೆ ಕುರಿತು ನಾವೇನಾದರೂ ಹೇಳಿಕೆ ಕೊಟ್ಟರೆ ನೋಟಿಸ್ ಕೊಡುತ್ತಾರೆ. ಅಂದರೆ ನಾವು ಮಾಡಿದ್ರೆ ಬಲಾತ್ಕಾರ, ಬೇರೆಯವರು ಮಾಡಿದ್ರೆ ಚಮತ್ಕಾರ ಅನ್ನುವ ಪರಿಸ್ಥಿತಿ ಇದೆ ಎಂದಿದ್ದರು. ಚೆನ್ನಗಿರಿ ಶಾಸಕ ಶಿವಗಂಗ ಬಸವರಾಜ ಸಹ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ, ಶಿವಕುಮಾರ್ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಬೇಕು ಎಂಬ ಹೇಳಿಕೆಗಾಗಿ ಇಬ್ಬರು ಕಾಂಗ್ರೆಸ್ ಶಾಸಕರಾದ ಎಚ್.ಡಿ. ರಂಗನಾಥ್ ಮತ್ತು ಎಚ್.ಎ. ಇಕ್ಬಾಲ್ ಹುಸೇನ್ ಅವರಿಗೆ ನೋಟಿಸ್ ನೀಡಲಾಗಿತ್ತು.
ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿರುವ ಸಮಯದಲ್ಲೇ ಯತೀಂದ್ರ ಅವರ ಹೇಳಿಕೆ ಅವರು ತಮ್ಮ ತಂದೆಯ ಉತ್ತರಾಧಿಕಾರಿಯ ಬಗ್ಗೆ ಮಾತನಾಡುತ್ತಿದ್ದಾರೆಯೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.
Advertisement