

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ 'ಉತ್ತರಾಧಿಕಾರಿ' ಹೇಳಿಕೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಶನಿವಾರ ತೀವ್ರ ವಾಗ್ದಾಳಿ ನಡೆಸಿದರು.
ಚಲನಚಿತ್ರ ಕಲಾವಿದರಿಗೆ ನಟ್ಟು ಬೋಲ್ಟು ಟೈಟು ಮಾಡ್ತೀನಿ ಅನ್ನೋ ಧಮ್ಕಿ ಹಾಕೋಕೆ ಧೈರ್ಯ ಇದೆ. ಶಾಸಕರಿಗೆ ತಗ್ಗಿ-ಬಗ್ಗಿ ನಡೀಬೇಕು ಅಂತ ಧಮ್ಕಿ ಹಾಕೋ ಧೈರ್ಯ ಇದೆ. ಕಾರ್ಯಕರ್ತರಿಗೆ "ನಿಮ್ಮ ಛತ್ರಿ ಬುದ್ಧಿ ಗೊತ್ತು" ಅಂತ ಆವಾಜ್ ಹಾಕೋಕೆ ಧೈರ್ಯ ಇದೆ. ಆದರೆ ಕೆಪಿಸಿಸಿ ಅಧ್ಯಕ್ಷರಾಗಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಿಗೆ ಒಂದು ನೋಟೀಸು ಕೊಡೋ ಧೈರ್ಯನೂ ಇಲ್ಲವಾ ಡಿಸಿಎಂ ಡಿಕೆ ಶಿವಕುಮಾರ್ ಅವರೇ? ಎಂದು ಆರ್ ಅಶೋಕ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಲ್ಲದಕ್ಕೂ ಡೆಲ್ಲಿ ಹೈಕಮಾಂಡ್ ಕಡೆ ಮುಖ ಮಾಡುವ ನೀವು, ನಾಳೆ ಅಪ್ಪಿ ತಪ್ಪಿ ಮುಖ್ಯಮಂತ್ರಿ ಆದರೆ ರಾಜ್ಯವನ್ನು ಹೇಗೆ ಮುನ್ನಡೆಸುತ್ತೀರಿ ಡಿ.ಕೆ.ಶಿವಕುಮಾರ್ ಅವರೇ?
ದಿವಂಗತ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿ ಆಗಿದ್ದರೂ ಸೋನಿಯಾ ಗಾಂಧಿ ಅವರೇ ತಮ್ಮ ಕೈಯಲ್ಲಿ ಕೀಲಿ ಇಟ್ಟುಕೊಂಡಿದ್ದಂತೆ, ಅಕಸ್ಮಾತ್ ತಾವು ಮುಖ್ಯಮಂತ್ರಿ ಆದರೂ ಸಿದ್ದರಾಮಯ್ಯನವರೇ ಸೂಪರ್ ಸಿಎಂ ಆಗಿ ಉಳಿಯುವುದರಲ್ಲಿ ಯಾವುದೇ ಅನುಮಾನ ಇಲ್ಲ.
ತಮ್ಮಂತಹ ದುರ್ಬಲ ನಾಯಕರು ರಾಜ್ಯದ ಮುಖ್ಯಮಂತ್ರಿ ಆದರೆ ಕನ್ನಡಿಗರಿಗೆ ಏನು ಪ್ರಯೋಜನ ಎಂದು ಡಿಸಿಎಂ ವಿರುದ್ಧ ಬಿಜೆಪಿ ನಾಯಕ ವಾಗ್ದಾಳಿ ನಡೆಸಿದ್ದಾರೆ.
Advertisement