ಮತ್ತೊಬ್ಬ ಏಕನಾಥ ಶಿಂಧೆ ಹುಟ್ಟಲು ಸಾಧ್ಯವಿಲ್ಲ; 'ನವೆಂಬರ್ ಕ್ರಾಂತಿ'ಗೆ ಕಾಂಗ್ರೆಸ್ ಅವಕಾಶ ನೀಡಲ್ಲ!

ಈ ಮೂಲಕ ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಂಡಾಯವೇಳಲು ಸಾಧ್ಯವಿಲ್ಲ ಎಂದಿದ್ದಾರೆ.
DK Shivakumar, CM Siddaramaiah, Satish Jorkiholi
ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ
Updated on

ಬೆಂಗಳೂರು: "ನವೆಂಬರ್ ಕ್ರಾಂತಿ" ಮತ್ತು ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತಾದ ಊಹಾಪೋಹಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಪಕ್ಷದ ಹೈಕಮಾಂಡ್ ಅಂತಹ ಯಾವುದೇ ಕ್ರಾಂತಿಗೆ ಅವಕಾಶ ನೀಡುವುದಿಲ್ಲ ಎಂದು ಸೋಮವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಅವರು, ಏಕನಾಥ್ ಶಿಂಧೆ ಒಬ್ಬರೇ, ಅಜಿತ್ ಪವಾರ್ ಕೂಡ ಒಬ್ಬರೇ. ಮತ್ತೊಬ್ಬ ಏಕನಾಥ್ ಶಿಂಧೆ ಅಥವಾ ಪವಾರ್ ಹುಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದರು. ಈ ಮೂಲಕ ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಂಡಾಯವೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಸಚಿವ ಸಂಪುಟ ಪುನರ್ರಚನೆ ಮತ್ತು ನಾಯಕತ್ವ ಬದಲಾವಣೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, "ನಾನು ಈ ಬಗ್ಗೆ ಹಲವು ಬಾರಿ ಹೇಳಿದ್ದೇನೆ, ನನಗೆ ಅದರ ಬಗ್ಗೆ ಗೊತ್ತಿಲ್ಲ. ಇದನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ನಿರ್ಧರಿಸಲಾಗುತ್ತದೆ. ಆದ್ದರಿಂದ ನಾನು ಅದರ ಬಗ್ಗೆ ಏನನ್ನೂ ಹೇಳಲಾರೆ" ಎಂದರು.

DK Shivakumar, CM Siddaramaiah, Satish Jorkiholi
ಸಂಪುಟ ಪುನರಾಚನೆ: ಸಿಎಂ ಆಗಿ ಮುಂದುವರೆಯುತ್ತಾರೆಂದರೆ ಸ್ಥಾನ ತ್ಯಾಗಕ್ಕೂ ಸಿದ್ಧ ಎಂದ ಸಚಿವರು

ಇನ್ನೂ "ನವೆಂಬರ್ ಕ್ರಾಂತಿಯ ಬಗ್ಗೆಯೂ ನನಗೆ ಗೊತ್ತಿಲ್ಲ. ಪಕ್ಷವಿದೆ ಮತ್ತು ಹೈಕಮಾಂಡ್ ಇದೆ. ಅವರು ಯಾವುದೇ ಕ್ರಾಂತಿಗೆ ಏಕೆ ಅವಕಾಶ ನೀಡುತ್ತಾರೆ? ಅವರು ಅದಕ್ಕೆ ಅನುಮತಿಸುವುದಿಲ್ಲ" ಎಂದು ಹೇಳಿದರು.

ಮಹಾರಾಷ್ಟ್ರ ಮಾದರಿಯಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯಲಿದೆ ಎಂದು ವಿಪಕ್ಷಗಳು ಭವಿಷ್ಯ ನುಡಿದಿವೆ. ಕರ್ನಾಟಕದಲ್ಲಿ ಏಕನಾಥ ಶಿಂಧೆ ಹಾಗೂ ಅಜಿತ್ ಪವಾರ್ ರೀತಿಯಲ್ಲಿ ನಾಯಕತ್ವ ಹುಟ್ಟಿಕೊಳ್ಳುತ್ತದೆಯೇ? ಎಂದು ಕೇಳಿದಾಗ, ಅಂತಹ ಪ್ರಯತ್ನ ಅಸಾಧ್ಯ ಎಂದರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಪಕ್ಷ ಮತ್ತು ಸರ್ಕಾರದಿಂದ ಪ್ರತ್ಯೇಕವಾದ ಅಹಿಂದ ಚಳುವಳಿಯನ್ನು (ಸಿದ್ದರಾಮಯ್ಯ ನಂತರ) ಮುನ್ನಡೆಸುವ ಬಗ್ಗೆ ಮಾತನಾಡಿದ್ದಾರೆ ಎಂದರು.

DK Shivakumar, CM Siddaramaiah, Satish Jorkiholi
ನವೆಂಬರ್ ನಂತರ ಸಚಿವ ಸಂಪುಟ ಪುನಾರಚನೆ; CM ಸಿದ್ದರಾಮಯ್ಯ ಸುಳಿವು; ಕಾಂಗ್ರೆಸ್‌ ಪಾಳಯದಲ್ಲಿ ಚಟುವಟಿಕೆ ಚುರುಕು!

"ಇದಕ್ಕೂ, ಮುಖ್ಯಮಂತ್ರಿ ಬದಲಾವಣೆಗೂ ಯಾವುದೇ ಸಂಬಂಧವಿಲ್ಲ.... ನಾನು ಸಿಎಂ ಹುದ್ದೆ ಅಥವಾ ಪಕ್ಷದ ಅಧ್ಯಕ್ಷ ಹುದ್ದೆಯನ್ನು ಕೇಳಿಲ್ಲ ಮತ್ತು ಅವರು (ಯತೀಂದ್ರ) ಕೂಡ ಸಿಎಂ ಅಥವಾ ಪಕ್ಷದ ಅಧ್ಯಕ್ಷ ಹುದ್ದೆಯ ಬಗ್ಗೆ ಮಾತನಾಡಲಿಲ್ಲ" ಎಂದು ಹೇಳಿದರು.

2028 ರಲ್ಲಿ ಸಿಎಂ ಹುದ್ದೆಗೆ ಹಕ್ಕು ಮಂಡಿಸುತ್ತೀರಾ ಎಂದು ಕೇಳಿದಾಗ, "ಸಮಯ ಬಂದಾಗ ನೋಡೋಣ", ಚುನಾವಣೆ ನಡೆಯಬೇಕು ಮತ್ತು ಪರಿಸ್ಥಿತಿಯನ್ನು ಅವಲಂಬಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.

ದಲಿತ ಮುಖ್ಯಮಂತ್ರಿ ಬೇಡಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಸ್‌ಟಿ ಸಮುದಾಯದ ನಾಯಕ ಜಾರಕಿಹೊಳಿ, "ದಲಿತರಿಗೆ ಅವಕಾಶ ನೀಡಿದರೆ ಒಳ್ಳೆಯದು ಎಂದು ನಾನು ಸೇರಿದಂತೆ ಹಲವರು ಹೇಳಿದ್ದೇವೆ. ಪಕ್ಷವು ಅಂತಿಮವಾಗಿ ಯಾರು ಮತ್ತು ಯಾವ ಸಮುದಾಯದಿಂದ ಮುಖ್ಯಮಂತ್ರಿಯಾಗುತ್ತಾರೆ ಎಂಬುದನ್ನು ನಿರ್ಧರಿಸುತ್ತದೆ" ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ದಲಿತರೊಬ್ಬರು ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ, "ಮುಂದಿನ ದಿನಗಳಲ್ಲಿ ಅದು ಸಾಧ್ಯವಾಗಬಹುದು. ನಾವು ಕಾಯಬೇಕಾಗುತ್ತದೆ. ತಕ್ಷಣ ಅಂತಹ ಸಂದರ್ಭ ಇಲ್ಲ. ನಾವು ಅವಕಾಶವನ್ನು ಸೃಷ್ಟಿಸಬೇಕಾಗುತ್ತದೆ" ಎಂದು ಉತ್ತರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com