

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯ ನಂತರ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ(ಸಿಎಲ್‌ಪಿ) ನಾಯಕರಾಗಿ ಆಯ್ಕೆ ಮಾಡಿದಾಗ, ಅವರ ಅವಧಿಗೆ ಯಾವುದೇ ಸಮಯ ನಿಗದಿಪಡಿಸಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಅವರು ಮಂಗಳವಾರ ಹೇಳಿದ್ದಾರೆ.
ಆದಾಗ್ಯೂ, ಪಕ್ಷದ ಪ್ರತಿಯೊಬ್ಬರೂ ಹೈಕಮಾಂಡ್ ನಿರ್ಧರಿಸುವ ಯಾವುದೇ ನಿರ್ಧಾರಕ್ಕೆ ಬದ್ಧರಾಗಿರುತ್ತಾರೆ ಮತ್ತು ಸಿಎಂ ಬದಲಾವಣೆ ಗೊಂದಲಕ್ಕೆ ಅಂತ್ಯ ಹಾಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಗೆ ಒತ್ತಾಯಿಸಿದರು.
ಇಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ ಅವರು, ನಾವು "ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ಚರ್ಚೆ ನಡೆಸಿಲ್ಲ" ಎಂದು ಸ್ಪಷ್ಟಪಡಿಸಿದರು. ಆದರೆ ತುಮಕೂರಿನಲ್ಲಿ ಪರಮೇಶ್ವರ ನೇತೃತ್ವದ ಸಹಕಾರ ಸಂಘದ ಬಗ್ಗೆ ಚರ್ಚಿಸಿರುವುದಾಗಿ ತಿಳಿಸಿದರು.
"ಮೇ 2023ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಬಹುಮತ ಗಳಿಸಿ ಅಧಿಕಾರಕ್ಕೆ ಬಂದ ನಂತರ, ಸಿಎಲ್‌ಪಿ ನಾಯಕ(ಸಿದ್ದರಾಮಯ್ಯ)ರನ್ನು ಎಲ್ಲಾ ಶಾಸಕರ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಸಿದ್ದರಾಮಯ್ಯ ಕೇವಲ 2.5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ನಮಗೆ ಆಗ ತಿಳಿಸಿಲ್ಲ" ಎಂದು ಪರಮೇಶ್ವರ ಹೇಳಿದರು.
ಸಿದ್ದರಾಮಯ್ಯ ಅವರನ್ನು ಸಿಎಲ್‌ಪಿ ನಾಯಕ ಎಂದು ಘೋಷಿಸುವಾಗ ಹೈಕಮಾಂಡ್ ಅವರ ಅಧಿಕಾರಾವಧಿಗೆ ಯಾವುದೇ ಸಮಯ ನಿಗದಿಪಡಿಸಿಲ್ಲ ಎಂದು ಸ್ಪಷ್ಟಪಡಿಸಿದರು.
"ಅಂದಿನಿಂದ ಸಿಎಂ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಬೆಳವಣಿಗೆಗಳ ಬಗ್ಗೆ ನಮಗೆ ಮಾಹಿತಿ ಇಲ್ಲ. ನಮ್ಮ ಅಭಿಪ್ರಾಯದಲ್ಲಿ, ನಾವು ಸಿದ್ದರಾಮಯ್ಯ ಅವರನ್ನು ಐದು ವರ್ಷಗಳ ಕಾಲ ಸಿಎಂ ಆಗಿ ಆಯ್ಕೆ ಮಾಡಿದ್ದೇವೆ. ಹೈಕಮಾಂಡ್ ಬೇರೆ ರೀತಿಯಲ್ಲಿ ನಿರ್ಧರಿಸಿದರೆ, ನಾವು ಅದನ್ನು ಸ್ವೀಕರಿಸುತ್ತೇವೆ" ಎಂದು ಅವರು ಹೇಳಿದರು.
ರಾಜ್ಯದ ರಾಜಕೀಯ ವಲಯಗಳಲ್ಲಿ, ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ, ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಡುವೆ ಸಂಭಾವ್ಯ ಅಧಿಕಾರ ಹಂಚಿಕೆ ಒಪ್ಪಂದದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿವೆ.
"ಹೈಕಮಾಂಡ್ ಒಪ್ಪಿದರೆ ನಾನು ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ. ಅಲ್ಲದೆ ಹೈಕಮಾಂಡ್ ಈ ಗೊಂದಲಕ್ಕೆ ಅಂತ್ಯ ಹಾಡಬೇಕು. ಅವರಿಗೆ ಇದರ ಅರಿವಿದೆ. ಅಗತ್ಯವಿದ್ದರೆ, ನಾನು ಕೂಡ ಸ್ಪಷ್ಟಪಡಿಸುವಂತೆ ವಿನಂತಿಸುತ್ತೇನೆ" ಎಂದು ತಿಳಿಸಿದ್ದಾರೆ.
ಇನ್ನು ನಾಯಕತ್ವ ಬದಲಾವಣೆಯ ಸಂದರ್ಭದಲ್ಲಿ ದಲಿತ ಮುಖ್ಯಮಂತ್ರಿ ಬೇಡಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, "ಅಂತಹ ಬೇಡಿಕೆ ಇಡುವುದು ತಪ್ಪೇ? ಅದು ತಪ್ಪಾಗಿದ್ದರೆ, ನಾವು ಅದಕ್ಕೆ ಪ್ರತಿಕ್ರಿಯಿಸೋಣ. ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ" ಎಂದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ನಲ್ಲಿ ಅನೇಕ ಸಮರ್ಥ ನಾಯಕರು ಮುಖ್ಯಮಂತ್ರಿಯಾಗಬಹುದು, ಆದರೆ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸುವುದು ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಅವರು ಹೇಳಿದರು.
ನಂತರ ಮಾತನಾಡಿದ ಸಚಿವ ಮಹಾದೇವಪ್ಪ ಅವರು ಸಹ ಸಂಪುಟ ಪುನರ್ರಚನೆ ಅಥವಾ ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಪುನರುಚ್ಚರಿಸಿದರು.
"ಹೈಕಮಾಂಡ್ ನಿರ್ಧರಿಸಿದರೆ, ಅವರು ಐದು ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಏನಾಗುತ್ತದೆ ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ - ಉಳಿದವು ಊಹಾಪೋಹ, ಮತ್ತು ಈ ಊಹಾಪೋಹಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ" ಎಂದರು.
Advertisement