

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮಂಗಳವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ನಗರದಲ್ಲಿ ಪ್ರಸ್ತಾವಿತ ಸುರಂಗ ರಸ್ತೆ ಯೋಜನೆಯನ್ನು ಕೈಬಿಡುವಂತೆ ಮನವಿ ಮಾಡಿದರು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮೆಟ್ರೋ ಮತ್ತು ಉಪನಗರ ರೈಲು ಜಾಲಗಳ ವಿಸ್ತರಣೆ ಮಾಡಬೇಕು ಎಂದು ಪ್ರತಿಪಾದಿಸಿದರು.
ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಅವರೊಂದಿಗಿನ ಒಂದು ಗಂಟೆಯ ಸಭೆಯು "ಬಹಳ ಫಲಪ್ರದ" ಎಂದಿರುವ ಬಿಜೆಪಿ ಸಂಸದ, ಬೆಂಗಳೂರು ಟ್ರಾಫಿಕ್, ಗುಂಡಿ ಸಮಸ್ಯೆ ಬಗ್ಗೆ ವಿಸ್ತೃತವಾದ ಚರ್ಚೆ ಆಯ್ತು. ಬಹಳ ಸೌಹಾರ್ದಯುತವಾಗಿ ಚರ್ಚೆ ನಡೆಯಿತು. ಶಾಂತವಾಗಿ ನಾನು ಕೊಟ್ಟ ಪ್ರಸೆಂಟೇಶನ್ ಆಲಿಸಿದ್ರು. ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ.
"ನಗರದಲ್ಲಿ ಸಾರ್ವಜನಿಕ ಸಾರಿಗೆಯನ್ನು ವಿಸ್ತರಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ. ಟ್ರಾಫಿಕ್ ಕಡಿಮೆ ಆಗಬೇಕು ಅಂದ್ರೆ ನಮ್ಮ ರಸ್ತೆಗಳಲ್ಲಿರುವ ವೆಹಿಕಲ್ ಗಳ ಸಂಖ್ಯೆ ಕಡಿಮೆಯಾಗಬೇಕು. ಶೇ.70 ರಷ್ಟು ಜನ ಸಾರ್ವಜನಿಕ ಸಾರಿಗೆ ಉಪಯೋಗ ಮಾಡುವಂತೆ ಮಾಡಬೇಕು ಎಂದರು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಕಾರು ಮಾತ್ರ ಸಂಚರಿಸುವ ಸುರಂಗ ಯೋಜನೆಗೆ ಖರ್ಚು ಮಾಡುವ ಹಣವನ್ನು ಮೆಟ್ರೋದಂತಹ ಸಾಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಗಳಿಗೆ ಖರ್ಚು ಮಾಡಬೇಕು ಎಂದು ನಾನು ವಿನಂತಿಸಿದ್ದೇನೆ. ಕಾರುಗಳಿಗಿಂತ ಹೆಚ್ಚಿನ ಜನರನ್ನು ಸ್ಥಳಾಂತರಿಸುವುದು ನಮ್ಮ ನೀತಿಯಾಗಿರಬೇಕು" ಎಂದು ವರದಿಗಾರರಿಗೆ ತಿಳಿಸಿದ್ದಾರೆ.
300 ಕಿ.ಮೀ ಮೆಟ್ರೋ ಸಂಪರ್ಕ ಮಾಡಿಕೊಡಬೇಕು. 3 ನಿಮಿಷಕ್ಕೊಂದು ಮೆಟ್ರೋ ಸಿಗುವಂತೆ ಮಾಡಬೇಕು. ಜನ ಇರುವ ಜಾಗದಿಂದ 5 ನಿಮಿಷ ನಡೆದುಕೊಂಡು ಹೋದರೇ ಮೆಟ್ರೋ ಸ್ಟೇಷನ್ ಸಿಗಬೇಕು. ಮಾಸ್ಟರ್ ಪ್ಲ್ಯಾನ್ ನಲ್ಲಿರುವಂತೆ 300 ಕಿ.ಮೀ ಸಬ್ ಅರ್ಬನ್ ರೈಲು ಕೂಡ ಬೆಂಗಳೂರಿಗೆ ಅವಶ್ಯಕತೆ ಇದೆ. ಸಬ್ ಅರ್ಬನ್ ರೈಲು ಮತ್ತು ಮೆಟ್ರೋ ಎರಡು ಕಂಪ್ಲೀಟ್ ಆದ್ರೆ 600 ಕಿ.ಮೀ ಸಾರ್ವಜನಿಕ ಸಾರಿಗೆ ಸಿಗುತ್ತೆ. ಇದರಿಂದ ಟ್ರಾಫಿಕ್ ಕಡಿಮೆ ಆಗುತ್ತೆ ಅನ್ನೋ ಸಲಹೆ ಕೊಟ್ಟಿದ್ದೇನೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಆದಾಗ್ಯೂ, ಪ್ರಸ್ತಾವಿತ ಸುರಂಗ ರಸ್ತೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್ ಅವರು, 'ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳ'ಕ್ಕೆ" ನೇರ ಪ್ರವೇಶವನ್ನು ಒದಗಿಸುತ್ತದೆ ಎಂದು ಹೇಳಿದ್ದಾರೆ.
ಒಟ್ಟು 16.75 ಕಿಮೀ ಸಿಗ್ನಲ್-ಮುಕ್ತ ಸುರಂಗವು ಪ್ರಯಾಣಿಕರಿಗೆ 25ಕ್ಕೂ ಹೆಚ್ಚು ಸಂಚಾರ ಅಡಚಣೆಗಳನ್ನು ದಾಟಲು ಅನುವು ಮಾಡಿಕೊಡುತ್ತದೆ ಮತ್ತು ಇದು ಪ್ರತಿದಿನ 45 ನಿಮಿಷಗಳಿಗಿಂತ ಹೆಚ್ಚು ಪ್ರಯಾಣದ ಸಮಯವನ್ನು ಉಳಿಸುತ್ತದೆ ಎಂದಿದ್ದಾರೆ.
Advertisement