

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಮತ್ತು 'ನವೆಂಬರ್ ಕ್ರಾಂತಿ' ಬಗ್ಗೆ ಊಹಾಪೋಹಗಳ ನಡುವೆ ಕಾಂಗ್ರೆಸ್‌ನ ಮಾಜಿ ಸಂಸದ ಡಿ ಕೆ ಸುರೇಶ್ ತಮ್ಮ ಹಿರಿಯ ಸಹೋದರ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸಿಎಂ ಆಗಿ ನೋಡಲು ಬಯಸುತ್ತೇನೆ. ಅದು ಅವರ ಅದೃಷ್ಟ ಕೈಹಿಡಿದರೆ ಅವರು ಉನ್ನತ ಹುದ್ದೆಯನ್ನು ಅಲಂಕರಿಸುತ್ತಾರೆ ಎಂದು ಹೇಳಿದ್ದಾರೆ. ಮುಂದಿನ ತಿಂಗಳು ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷಗಳ ಅವಧಿಯ ಅರ್ಧವನ್ನು ತಲುಪಲಿದ್ದು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಊಹಾಪೋಹಗಳು ಶುರವಾಗಿವೆ. ಇದನ್ನು ಕೆಲವರು 'ನವೆಂಬರ್ ಕ್ರಾಂತಿ' ಎಂದು ಕರೆಯುತ್ತಿದ್ದಾರೆ. ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನನಗೆ, ನವೆಂಬರ್ ಎಂದರೆ 'ಕನ್ನಡ ರಾಜ್ಯೋತ್ಸವ' ಮತ್ತು ಕನ್ನಡಿಗರ ಹಬ್ಬವನ್ನು ಆಚರಿಸುವುದು ಎಂದು ಅವರು ಹೇಳಿದರು.
ಬಿಹಾರ ಚುನಾವಣಾ ಫಲಿತಾಂಶದ ನಂತರ ನವೆಂಬರ್‌ನಲ್ಲಿ ನಡೆಯಲಿರುವ ಅಧಿಕಾರ ಹಂಚಿಕೆ ಮತ್ತು ಸಚಿವ ಸಂಪುಟ ಪುನರ್ರಚನೆ ಚರ್ಚೆಗಳ ಕುರಿತಂತೆ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಡಿಕೆ ಸುರೇಶ್, ಈ ವಿಷಯಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನೀವು ಇದರ ಬಗ್ಗೆ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರು ಮತ್ತು ಎಐಸಿಸಿ ನಾಯಕರನ್ನು ಕೇಳಬೇಕು ಎಂದರು. ತಮ್ಮ ಸಹೋದರನ ರಾಜಕೀಯ ಭವಿಷ್ಯದ ಬಗ್ಗೆ ಕೇಳಿದಾಗ, ಸಿಎಂ ಆಗುವ ಕುರಿತು ಅವರ ಹಣೆಯಲ್ಲಿ ಬರೆದಿದ್ದರೆ ಆಗುತ್ತದೆ. ಇಲ್ಲದಿದ್ದರೆ ಆಗಲ್ಲ. ಅದರ ಬಗ್ಗೆ ಏಕೆ ಚಿಂತಿಸಬೇಕು? ನನ್ನ ಸಹೋದರನನ್ನು ಮುಖ್ಯಮಂತ್ರಿಯಾಗಿ ನೋಡುವ ಬಯಕೆ ನನಗೂ ಇದೆ ಎಂದರು.
ಆ ಗುರಿಯತ್ತ ಯಾವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಕೇಳಿದಾಗ 'ಯಾವುದೇ ಪ್ರಯತ್ನಗಳಿಲ್ಲ; ಪಕ್ಷ ಏನು ನಿರ್ಧರಿಸಿದರೂ, ಪಕ್ಷದ ರಾಜ್ಯ ಅಧ್ಯಕ್ಷರು ಮತ್ತು ಉಪಮುಖ್ಯಮಂತ್ರಿಯಾಗಿರುವ ಶಿವಕುಮಾರ್ ಅವರು ಪಕ್ಷಕ್ಕೆ ಯಾವುದೇ ಹಾನಿಯಾಗದಂತೆ ವರ್ತಿಸುವುದು ಅವರ ಕರ್ತವ್ಯ. ಅವರು ಅದನ್ನು ಮಾಡುತ್ತಾರೆ ಎಂದು ನನಗೆ ವಿಶ್ವಾಸವಿದೆ' ಎಂದು ಉತ್ತರಿಸಿದರು. ಕರ್ನಾಟಕದ ರಾಜಕೀಯ ವಲಯದಲ್ಲಿ, ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ, ಈ ವರ್ಷದ ಕೊನೆಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಊಹಾಪೋಹಗಳು ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಒಪ್ಪಂದವನ್ನು ಉಲ್ಲೇಖಿಸಿ ಅವರು ಈ ಮಾತುಗಳನ್ನು ಹೇಳಿದ್ದಾರೆ.
ಈ ಊಹಾಪೋಹಗಳ ನಡುವೆ, ಸೋಮವಾರ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದರೇ ಐದು ವರ್ಷಗಳ ಅವಧಿಗೆ ನಾನೇ ಅಧಿಕಾರದಲ್ಲಿ ಮುಂದುವರಿಯುವುದಾಗಿ ಹೇಳಿದ್ದರು. ಇನ್ನು 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರುವುದನ್ನು ಸಿದ್ದರಾಮಯ್ಯ ತಳ್ಳಿ ಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ಪಕ್ಷಕ್ಕೆ ಅವರ ಅಗತ್ಯವಿದೆ. ಕಾಂಗ್ರೆಸ್ 2028ರ ಚುನಾವಣೆಯನ್ನು ಹಾಲಿ ಮುಖ್ಯಮಂತ್ರಿ ನಾಯಕತ್ವದಲ್ಲಿ ಎದುರಿಸಲಿದೆ ಎಂದು ಹೇಳಿದರು. 95 ಮತ್ತು 98 ವರ್ಷ ವಯಸ್ಸಿನ ಜನರು ಇನ್ನೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಮತ್ತೆ ಸ್ಪರ್ಧಿಸುವುದಾಗಿ ಹೇಳಿದರೆ ತಪ್ಪೇನಿಲ್ಲ. ಅವರು ನಮ್ಮ ನಾಯಕ, ಮತ್ತು ಅವರ ನಾಯಕತ್ವದಲ್ಲಿ, ನಾವು ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದು ಡಿಕೆ ಸುರೇಶ್ ಹೇಳಿದರು.
ಇನ್ನು ದಲಿತ ಮುಖ್ಯಮಂತ್ರಿ ಬೇಡಿಕೆ ಕುರಿತು ಚರ್ಚೆಗಳಿಗೂ ಪ್ರತಿಕ್ರಿಯಿಸಿದ ಡಿಕೆ ಸುರೇಶ್, ದಲಿತ ಮುಖ್ಯಮಂತ್ರಿ ಬೇಡಿಕೆಗಳು ಮತ್ತು ನಾಯಕತ್ವ ಬದಲಾವಣೆಯ ಚರ್ಚೆಯ ನಡುವೆ ಕಾಂಗ್ರೆಸ್‌ನಲ್ಲಿ ದಲಿತ ಸಮಾವೇಶವನ್ನು ನಡೆಸುವ ಯೋಜನೆಗಳ ಕುರಿತು, ಅದರಲ್ಲಿ ಯಾವುದೇ ತಪ್ಪಿಲ್ಲ, ಏಕೆಂದರೆ ಅದು ಪಕ್ಷದ ಸಂಘಟನೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದರು. ದಲಿತ ಸಮಾವೇಶವನ್ನು ಪಕ್ಷದ ಬ್ಯಾನರ್ ಅಡಿಯಲ್ಲಿ ನಡೆಸಬೇಕೇ ಎಂದು ಕೇಳಿದಾಗ ಅದನ್ನು ಆಯೋಜಿಸಲು ಯೋಜಿಸುತ್ತಿರುವವರಿಗೆ ಬಿಡಲಾಗಿದೆ ಎಂದು ಅವರು ಹೇಳಿದರು.
Advertisement