
ಬೆಂಗಳೂರು: ಇತ್ತೀಚಿಗೆ ರಾಹುಲ್ ಗಾಂಧಿ ಅವರ ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ನಿಂದ ಕೆಂಗಣ್ಣಿಗೆ ಗುರಿಯಾಗಿ ಸಚಿವ ಸ್ಥಾನ ಕಳೆದುಕೊಂಡ ಕೆ.ಎನ್. ರಾಜಣ್ಣ ಕುರಿತು ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಜಣ್ಣ ಬಿಜೆಪಿಗೆ ಅರ್ಜಿ ಹಾಕಿಕೊಂಡಿದ್ದಾರೆ. ಬೇರೆ ಬೇರೆ ಪಕ್ಷಗಳ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ರಾಜಣ್ಣ ತಮ್ಮ ಮಾತಿನಿಂದಲೇ ಕೆಟ್ಟುಹೋದರು. ಮಂತ್ರಿಯಾದಾಗ ಅವರು ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಮಾತಿದೆ. ಇದರಲ್ಲಿ ನಮ್ಮ ನಾಯಕರ ಷಡ್ಯಂತ್ರ ಇಲ್ಲವೇ ಇಲ್ಲ. ಪಕ್ಷದ ಮೇಲೆ ಗೂಬೆ ಕೂರಿಸಲು ಪಿತೂರಿ ನಡೆಯುತ್ತಿದೆ ಎಂದು ಹೇಳಿದರು.
ಡೆಲ್ಲಿ ಸಮಾವೇಶ ಮಾಡಲಿ, ನಾವು ಹಿಡಿದುಕೊಳ್ಳಲು ಆಗುತ್ತಾ? ರಾಜಣ್ಣನವರ ಬ್ರೈನ್ ಮ್ಯಾಪಿಂಗ್ ಆಗಲಿ. ಯಾರ ಜೊತೆ ಸಂಪರ್ಕದಲ್ಲಿದ್ದಾರೆಂದು ತಿಳಿಯಲಿದೆ. ನಮ್ಮ ಸರ್ಕಾರ ಇದೆ ಎಂದು ರಾಜಣ್ಣ ಇಲ್ಲೇ ಇದ್ದಾರೆ. ಅವರು ಬೇರೆ ಬೇರೆ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಬಾಲಕೃಷ್ಣ ಹೇಳಿದ್ದಾರೆ.
ಕೆಎನ್ ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಅವರ ಅಭಿಮಾನಿಗಳು ದೆಹಲಿ ಯಾತ್ರೆ ನಡೆಸುತ್ತಿರುವಂತೆಯೇ ಬಾಲಕೃಷ್ಣ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Advertisement