
ಬೆಂಗಳೂರು: ಧರ್ಮಸ್ಥಳ `ಬುರುಡೆ’ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಆರೋಪ ಮಾಡಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿ ತಮಿಳುನಾಡು ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್ ಅವರು ಶನಿವಾರ ಹೇಳಿದ್ದಾರೆ ಮತ್ತು ತಮ್ಮ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಎಂದು ತಿರುಗೇಟು ನೀಡಿದ್ದಾರೆ.
ಇದು ಬಲಪಂಥೀಯರ ರಾಜಕೀಯವನ್ನು ವಿರೋಧಿಸುವ "ಬಲಪಂಥೀಯ ಸಂಘಟಿತ ಪ್ರಯತ್ನ" ಎಂದು ಆರೋಪಿಸಿದ ಸೆಂಥಿಲ್, ಧರ್ಮಸ್ಥಳ ಕೇಸ್‍ಗೆ ತಮಿಳುನಾಡಿನ ಲಿಂಕ್ ಇದೆ ಎಂಬ ಆರೋಪ ಕೇಳಿಬರುತ್ತಿದೆ. ಹಾಗಾದರೆ ಇಲ್ಲಿ ಹಲವು ಮಂದಿ ತಮಿಳುನಾಡಿನ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಅದೇ ರೀತಿ ಅಣ್ಣಾಮಲೈ ಅವರು ಸಹ ಐಪಿಎಸ್ ಅಧಿಕಾರಿಯಾಗಿದ್ದವರು. ಅಣ್ಣಾಮಲೈ ಅವರಿಗೆ ತಲೆ ಬುರುಡೆ ಬಗ್ಗೆ ಯಾಕೆ ವಿಚಾರಣೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ರೆಡ್ಡಿ ನಮ್ಮ ವಿರುದ್ಧ ಯಾಕೆ ಆರೋಪ ಮಾಡ್ತಾ ಇದ್ದಾರೆ? ಅಣ್ಣಾಮಲೈ ವಿರುದ್ಧ ಯಾಕೆ ವಿಚಾರಣೆ ಮಾಡ್ತಿಲ್ಲ? ಅವರ ವಿಚಾರಣೆಯನ್ನೂ ಮಾಡ್ಬೇಕಲ್ವಾ ಎಂದಿದ್ದಾರೆ.
ಈ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರತಿಪಾದಿಸಿದ ಸೆಂಥಿಲ್, ತಮ್ಮ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಎಂದು ಸ್ಪಷ್ಟವಾಗಿ ತಿರಸ್ಕರಿಸಿದರು.
ಸದ್ಯ ಬಿಜೆಪಿಯಲ್ಲಿರುವ ಜನಾರ್ದನ ರೆಡ್ಡಿ ಕಳೆದ ತಿಂಗಳು ಇಡೀ ಧರ್ಮಸ್ಥಳ ಪ್ರಕರಣವನ್ನು ಸೆಂಥಿಲ್ ಮೂಲಕ ಷಡ್ಯಂತ್ರ ಮಾಡಲಾಗಿದೆ ಎಂದು ಆರೋಪಿಸಿದ್ದರು.
"ಇತ್ತೀಚೆಗೆ, ಗಂಗಾವತಿ ಶಾಸಕರು, ಕೆಲವು ವಾಟ್ಸಾಪ್ ಸಂದೇಶವನ್ನು ಆಧರಿಸಿ, ನಾನೇ ಮಾಸ್ಟರ್ ಮೈಂಡ್(ಧರ್ಮಸ್ಥಳದ ವಿರುದ್ಧದ ಆರೋಪಗಳ ಹಿಂದೆ) ಎಂದು ಆರೋಪಿಸಿದ್ದಾರೆ. ಆರಂಭದಲ್ಲಿ ನಾನು - ಇಂತಹ ಬಾಲಿಶ ಕಾಮೆಂಟ್‌ಗಳಿಗೆ ಏಕೆ ಪ್ರತಿಕ್ರಿಯಿಸಬೇಕು ಎಂದುಕೊಂಡಿದ್ದೆ. ಆದರೆ ಪ್ರತಿದಿನ ಕೆಲವು ಕಥೆಗಳನ್ನು ನಿರ್ಮಿಸಲಾಗುತ್ತಿದೆ". ಹೀಗಾಗಿ ರೆಡ್ಡಿ ವಿರುದ್ಧ ಕೇಸ್ ದಾಖಲಿಸಿದ್ದೇನೆ ಎಂದು ಸೆಂಥಿಲ್ ಹೇಳಿದರು.
ನನ್ನ ಹೆಸರನ್ನು ಬಳಸಿಕೊಂಡ ಜನಾರ್ದನ ರೆಡ್ಡಿ ವಿರುದ್ಧ ನಾನು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ನ್ಯಾಯಾಲಯವು ಅದನ್ನು ಗಮನಕ್ಕೆ ತೆಗೆದುಕೊಂಡಿದೆ. ಅವರಿಗೆ ನೋಟಿಸ್ ನೀಡಲಾಗುವುದು. ನನ್ನ ವಿರುದ್ಧ ಯಾವ ಆಧಾರದ ಮೇಲೆ ಆರೋಪಗಳನ್ನು ಮಾಡಲಾಗಿದೆ ಎಂಬುದರ ಕುರಿತು ಅವರು(ರೆಡ್ಡಿ) ನ್ಯಾಯಾಲಯಕ್ಕೆ ಬಂದು ಉತ್ತರಿಸಬೇಕಾಗುತ್ತದೆ" ಎಂದು ಸೆಂಥಿಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
42 ಎಸಿಎಂಎಂ ನ್ಯಾಯಾಲಯದಲ್ಲಿ ಜನಾರ್ದನ ರೆಡ್ಡಿ ವಿರುದ್ಧ ಪಿಸಿಆರ್ ಫೈಲ್ ಮಾಡಿದ್ದು, ಸೆ.11ಕ್ಕೆ ಈ ಅರ್ಜಿ ವಿಚಾರಣೆ ನಡೆಯಲಿದೆ.
Advertisement