
ಬೆಂಗಳೂರು: ಜಾತ್ಯತೀತ ಮತ್ತು ಬಹುತ್ವ ಸಮಾಜಕ್ಕೆ ಹೆಸರುವಾಸಿಯಾದ ಹಳೇ ಮೈಸೂರು ಭಾಗದ ಮದ್ದೂರಿನಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಕಲ್ಲು ತೂರಾಟದಿಂದ ಆರು ಜನ ಗಾಯಗೊಂಡು 20 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು ಎಂದು ವರದಿಯಾಗಿದೆ.
ಈ ದಾಳಿಯು ರಾಮ್-ರಹೀಮ್ ನಗರ ಪ್ರದೇಶದಿಂದ, ವಿಶೇಷವಾಗಿ ಮಸೀದಿ ಮತ್ತು ಸುತ್ತಮುತ್ತಲಿನ ಟೆರೇಸ್‌ಗಳ ಮೇಲಿಂದ ನಡೆಯಿತು ಎಂದು ಸ್ಥಳೀಯರು ಹೇಳಿದ್ದಾರೆ. ಈ ಘಟನೆಯಿಂದ ಕೆರಳಿದ ಹಿಂದೂಗಳು ಬೃಹತ್ ಪ್ರತಿಭಟನೆ ನಡೆಸುವಂತೆ ಮಾಡಿತು, ಜೊತೆಗೆ ಪೊಲೀಸರ ನಿಷ್ಕ್ರಿಯತೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ದಶಕಗಳಿಂದ ಕೋಮು ಹಿಂಸಾಚಾರದಿಂದ ಮುಕ್ತವಾಗಿದ್ದ ಈ ಪ್ರದೇಶದಲ್ಲಿ ವೇಗವಾಗಿ ಕೋಮು ದ್ವೇಷ ಹರಡಿ ರಣರಂಗವಾಗುತ್ತಿದೆ. ನಾಗಮಂಗಲ, ಕೆರೆಗೋಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉದ್ವಿಗ್ನತೆ ಭುಗಿಲೆದ್ದಿದೆ.
ಒಂದು ಕಾಲದಲ್ಲಿ ಕರಾವಳಿ ಕರ್ನಾಟಕಕ್ಕೆ ಸೀಮಿತವಾಗಿದ್ದ ಕೋಮು ಗಲಭೆಈಗ ಹಳೆಯ ಮೈಸೂರು ಬೆಲ್ಟ್ ಗೂ ಹರಡುತ್ತಿದೆ, ಜೆಡಿಎಸ್ ಎನ್‌ಡಿಎ ಮಿತ್ರಪಕ್ಷವಾಗಿ ಬಿಜೆಪಿಯೊಂದಿಗೆ ಕೈಜೋಡಿಸಿದ ನಂತರ ಕೋಮು ಶಕ್ತಿಗಳು ಈ ಪ್ರದೇಶವನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿವೆ ಎಂಬ ಭಯವನ್ನು ಹುಟ್ಟುಹಾಕಿದೆ.
ಭಾರತೀಯ ಜನತಾ ಪಕ್ಷವು ಈ ಘಟನೆಯನ್ನು ಸದುಪಯೋಗಪಡಿಸಿಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರವು "ಓಲೈಕೆ ರಾಜಕೀಯ"ದಲ್ಲಿ ತೊಡಗಿಸಿಕೊಂಡಿದೆ ಮತ್ತು ಹಿಂದೂ ಧಾರ್ಮಿಕ ಸಂಪ್ರದಾಯಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಎನ್ಐಎ ತನಿಖೆಗೆ ಒತ್ತಾಯಿಸಿದ್ದು, ಮದ್ದೂರು ಹಿಂಸಾಚಾರವು ಹಿಂದೂಗಳ ಮೇಲಿನ ದಾಳಿಯ ಮಾದರಿಯ ಭಾಗವಾಗಿದೆ ಮತ್ತು ಪೊಲೀಸರು ದಾಳಿಕೋರರ ಬಗ್ಗೆ ಮೃದುವಾಗಿದ್ದಾರೆ ಎಂದು ಆರೋಪಿಸಿದರು.
ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಕಾಂಗ್ರೆಸ್ "ಹಿಂದೂ ವಿರೋಧಿ" ಮತ್ತು ಸಡಿಲ ಆಡಳಿತದ ಮೂಲಕ "ದೇಶ ವಿರೋಧಿ ಶಕ್ತಿಗಳಿಗೆ" ಅನುವು ಮಾಡಿಕೊಡುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಆಡಳಿತದಲ್ಲಿ ಮಂಡ್ಯದಿಂದ ಧಾರವಾಡ, ಬಾಗಲಕೋಟೆಯವರೆಗೆ ಹಿಂದೂ ಹಬ್ಬಗಳ ಸಮಯದಲ್ಲಿ ನಡೆಯುತ್ತಿರುವ ಅಡ್ಡಿಗಳ ಸರಮಾಲೆಗಳ ಬಗ್ಗೆ ಬಿಜೆಪಿ ಪ್ರಶ್ನಿಸಿದೆ, ಇದು ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ದೂರಿದೆ.
ಮುಂಬರುವ ಚುನಾವಣೆಗಳಿಗೆ ಮುಂಚಿತವಾಗಿ ರಾಜಕೀಯ ಲಾಭಕ್ಕಾಗಿ ಸಮುದಾಯಗಳನ್ನು ಧ್ರುವೀಕರಿಸಲು ಬಿಜೆಪಿ ಧರ್ಮವನ್ನು ಬಳಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸುತ್ತಿದ್ದಾರೆ.
ಬಿಜೆಪಿ ಆಡಳಿತದಲ್ಲಿ (2019–2023) ನಡೆದ 752 ಕೋಮು ಘಟನೆಗಳನ್ನು ಲಕ್ಷ್ಮಣೇ ಉಲ್ಲೇಖಿಸಿದ್ದಾರೆ, ವಿರೋಧ ಪಕ್ಷದ ನಾಯಕರ ಪ್ರಚೋದನಕಾರಿ ಭಾಷಣಗಳನ್ನು ದೃಢವಾಗಿ ಎದುರಿಸಲಾಗುವುದು ಎಂದು ಎಚ್ಚರಿಸಿದರು. "ಧರ್ಮವನ್ನು ಲೆಕ್ಕಿಸದೆ ನಾವು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ" ಎಂದು ಸಿದ್ದರಾಮಯ್ಯ ಹೇಳಿದರು.
ಪರಿಣಾಮಕಾರಿ ಪೊಲೀಸ್ ಕ್ರಮದಿಂದಾಗಿ ಕರಾವಳಿ ಕರ್ನಾಟಕದಲ್ಲಿ ಉದ್ವಿಗ್ನತೆ ಉಂಟುಮಾಡುವಲ್ಲಿ ವಿಫಲವಾದ ಕೋಮುವಾದಿ ಶಕ್ತಿಗಳು ಈಗ ಒಳನಾಡಿನತ್ತ ಗಮನ ಹರಿಸುತ್ತಿವೆ ಎಂದು ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್ ಹೇಳಿದರು.
ಈ ಸನ್ನಿವೇಶವನ್ನು ಹಿಂದುತ್ವ ರಾಜಕೀಯದಲ್ಲಿ ಒಂದು ಕಾರ್ಯತಂತ್ರದ ಬದಲಾವಣೆ ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್. ಮೂರ್ತಿ ಬಣ್ಣಿಸಿದ್ದಾರೆ, ಮದ್ದೂರು ಮತ್ತು ನಾಗಮಂಗಲ ಧ್ರುವೀಕರಣಕ್ಕೆ ಫಲವತ್ತಾದ ನೆಲವಾಗಿದೆ ಎಂದಿದ್ದಾರೆ.
ಜೆಡಿಎಸ್ ಪ್ರಬಲ ನೆಲೆ ಕಂಡುಕೊಳ್ಳದ ಕಾರಣ ಹಾಗೂ ಎಚ್‌ಡಿ ಕುಮಾರಸ್ವಾಮಿಯಂತಹ ನಾಯಕರು ತವರು ನೆಲದಿಂದ ದೂರವಾಗಿರುವುದರಿಂದ, ಅವರ ಮತ ಬ್ಯಾಂಕ್ ಈಗ ಕೇಸರಿ ಬಲವರ್ಧನೆಗೆ ಪಕ್ವವಾಗಿದೆ" ಎಂದು ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. "ಒಂದು ಕಾಲದಲ್ಲಿ ಸಾಂಸ್ಕೃತಿಕ ಕೈಗನ್ನಡಿಯಾಗಿದ್ದ ಗಣೇಶ ಮೆರವಣಿಗೆಯಲ್ಲಿ ಉದ್ವಿಗ್ನತೆ ಉಂಟು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸ್ಥಳೀಯ ಕಾರ್ಯಕರ್ತರು ಬಿಜೆಪಿ ಶಕ್ತಿಗಳೊಂದಿಗೆ ಹೆಚ್ಚು ಹೆಚ್ಚು ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದರಿಂದ, ಜೆಡಿಎಸ್ ಅತಿದೊಡ್ಡ ಸೋಲು ಅನುಭವಿಸಬಹುದು ಎಂದು ಮೂರ್ತಿ ಭವಿಷ್ಯ ನುಡಿದಿದ್ದಾರೆ. ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಪಕ್ಷವು ತನ್ನ ನೆಲೆಯ ಮೇಲೆ ಹಿಡಿತ ಸಾಧಿಸದಿದ್ದರೇ ಪಕ್ಷ ಸಂಪೂರ್ಣ ಪ್ರಾಬಲ್ಯ ಕಳೆದುಕೊಳ್ಳುವ ಅಪಾಯವಿದೆ.
Advertisement