ಕೋಮು ಭಾವನೆ ಕೆರಳಿಸಿ, ಜನರನ್ನು ವಿಭಜಿಸಿ, ಬೆಂಕಿ ಹಚ್ಚುವುದೇ ಬಿಜೆಪಿ ನಾಯಕರ ಕೆಲಸ: ಡಿ.ಕೆ ಶಿವಕುಮಾರ್

ದೆಹಲಿಗೆ ಹೋಗಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು, ನರೇಗಾ ಅನುದಾನ, ಮೇಕೆದಾಟು, ಮಹದಾಯಿ ನೀರಾವರಿ ಯೋಜನೆಗಳಿಗೆ ಅನುಮತಿ ತೆಗೆದುಕೊಂಡು ಬರಲಿ ಎಂದು ಸವಾಲೆಸೆದರು.
DK Shivakumar
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ಕೋಮು ಭಾವನೆ ಕೆರಳಿಸಿ, ಜನರನ್ನು ವಿಭಜಿಸಿ, ಬೆಂಕಿ ಹಚ್ಚುವುದೇ ಬಿಜೆಪಿ ನಾಯಕರ ಕೆಲಸ. ಅವರಿಗೆ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮದ್ದೂರು ಗಣೇಶ ವಿಸರ್ಜನೆ ವೇಳೆ ನಡೆದಿರುವ ಕಲ್ಲು ತೂರಾಟ ಹಾಗೂ ಅದರ ಬೆನ್ನಲ್ಲೇ ಬಿಜೆಪಿ ನಾಯಕರು ಮದ್ದೂರಿಗೆ ತೆರಳಿರುವ ಬಗ್ಗೆ ಪ್ರತಿಕ್ರಿಯಿಸಿದರು. ಈ ಪ್ರಕರಣದ ಬಗ್ಗೆ ಈಗಾಗಲೇ ಸಿಎಂ, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಹೊರ ರಾಜ್ಯಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ನನಗೆ ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನನಗೆ ಸಂಪೂರ್ಣ ಮಾಹಿತಿ ಸಿಗದೇ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

ಬಿಜೆಪಿಯವರಿಗೆ ರಾಜಕಾರಣ ಮಾಡುವುದು ಬಿಟ್ಟು ಬೇರೆ ಕೆಲಸ ಏನಿದೆ? ಅವರು ದೆಹಲಿಗೆ ಹೋಗಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು, ನರೇಗಾ ಅನುದಾನ, ಮೇಕೆದಾಟು, ಮಹದಾಯಿ ನೀರಾವರಿ ಯೋಜನೆಗಳಿಗೆ ಅನುಮತಿ ತೆಗೆದುಕೊಂಡು ಬರಲಿ ಎಂದು ಸವಾಲೆಸೆದರು.

ಬೆಂಗಳೂರು ನಗರ ಶಾಸಕರ ಜೊತೆಗೆ ಸಿಎಂ ಸಭೆ ಬಗ್ಗೆ ಕೇಳಿದಾಗ, “ಈ ಸಭೆ ಮಂಗಳವಾರ ನಿಗದಿಯಾಗಿತ್ತು. ನಾನು ಕೊಯಮತ್ತೂರಿಗೆ ಹೋಗಬೇಕಿದ್ದ ಹಿನ್ನೆಲೆಯಲ್ಲಿ ಮುಂದೂಡುವಂತೆ ತಿಳಿಸಿದ್ದೆ. ಬುಧವಾರ ಸಂಜೆ ಈ ಸಭೆ ನಡೆದಿದೆ” ಎಂದು ತಿಳಿಸಿದರು.

DK Shivakumar
ಕೋಮು ಘರ್ಷಣೆ: ಸೆಪ್ಟೆಂಬರ್ 9 ರಂದು ಮದ್ದೂರು ಬಂದ್‌ಗೆ ಬಿಜೆಪಿ ಕರೆ

ಜಿಬಿಎ ಅಡಿಯಲ್ಲಿ ರಚನೆಯಾಗಿರುವ ನೂತನ ಪಾಲಿಕೆಗಳಿಗೆ ಉಸ್ತುವಾರಿ ಸಚಿವರ ನೇಮಕದ ಬಗ್ಗೆ ಮಾತನಾಡಿದ ಅವರು, ಮಂತ್ರಿಗಳು ಎಂದ ಮೇಲೆ ಕೇವಲ ತಮ್ಮ ಕ್ಷೇತ್ರಗಳ ಕೆಲಸ ಮಾತ್ರ ನೋಡುವುದಷ್ಟೇ ಅಲ್ಲ. ಇಡೀ ಜಿಲ್ಲೆ ಕಡೆ ಗಮನಹರಿಸಬೇಕು. ಕೆಲವು ಕಡೆ ನಾವು ಸೋತಿರುವ ಕ್ಷೇತ್ರಗಳಿವೆ. ಆ ಕ್ಷೇತ್ರಗಳಲ್ಲಿ ಸಮನ್ವಯತೆ ಸಾಧಿಸಬೇಕು. ಹೀಗಾಗಿ ಸಚಿವರಿಗೆ ಜವಾಬ್ದಾರಿ ವಹಿಸಲಾಗಿದೆ. ಇದರ ಜೊತೆಗೆ ಪಕ್ಷದ ವತಿಯಿಂದಲೂ ಸಂಘಟನೆ ವಿಚಾರವಾಗಿ ಜವಾಬ್ದಾರಿ ನೀಡಲಾಗುವುದು ಎಂದು ತಿಳಿಸಿದರು.

ಜವಾಹರ್ ಬಾಲ ಮಂಚ್ ವತಿಯಿಂದ ಸುಮಾರು 24 ಮಕ್ಕಳನ್ನು ರಾಜಸ್ಥಾನದಲ್ಲಿ ನಡೆಯಲಿರುವ ರಾಷ್ಟ್ರೀಯ ಶಿಬಿರಕ್ಕೆ ಕಳುಹಿಸಲಾಗುತ್ತಿದೆ. ಅವರಿಗೆ ಶುಭ ಹಾರೈಸುತ್ತಿದ್ದೇನೆ. ನಾನೇ ಈ ಮಕ್ಕಳ ಪ್ರಯಾಣ ವೆಚ್ಚವನ್ನು ಭರಿಸಿ ಕಳುಹಿಸುತ್ತಿದ್ದೇನೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com