
ಬೆಂಗಳೂರು: ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು(PIL) ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ಹೈಕೋರ್ಟ್‌ನ ನಿರ್ಧಾರವನ್ನು ಸ್ವಾಗತಿಸಿರುವ ಆಡಳಿತ ಕಾಂಗ್ರೆಸ್ ನಾಯಕರು ಸೋಮವಾರ ವಿರೋಧ ಪಕ್ಷ ಬಿಜೆಪಿ ಮತ್ತು ಅದರ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ,
ಇನ್ನು ದಸರಾ ಹಿಂದೂ ಹಬ್ಬ ಎಂದು ಪ್ರತಿಪಾದಿಸಿದ ಪ್ರತಿಪಕ್ಷ ಬಿಜೆಪಿ, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ದಸರಾ ಆಯೋಜಿಸುವ ಬಗ್ಗೆ ಕಾನೂನು ಜಾರಿಗೆ ತರಲಾಗುವುದು ಎಂದು ಹೇಳಿದೆ.
ಹೈಕೋರ್ಟ್ ತೀರ್ಪು ಸ್ವಾಗತಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಸರ್ಕಾರ ಸಂವಿಧಾನದ ಪ್ರಕಾರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
"ಪ್ರತಾಪ್ ಸಿಂಹ ಮತ್ತು ಇತರ ಬಿಜೆಪಿ ನಾಯಕರು ಸಂವಿಧಾನವನ್ನು ಸರಿಯಾಗಿ ಓದಲಿ. ನ್ಯಾಯಾಲಯಗಳು ಸಹ ಸಂವಿಧಾನದ ಪ್ರಕಾರ ಕಾರ್ಯನಿರ್ವಹಿಸುತ್ತವೆ ಮತ್ತು ಅದು ತನ್ನ ತೀರ್ಪನ್ನು ನೀಡಿದೆ.... ನಾವು ನ್ಯಾಯಾಲಯಕ್ಕೆ ನಮಸ್ಕರಿಸುತ್ತೇವೆ" ಎಂದು ಡಿಸಿಎಂ ಹೇಳಿದರು.
ಸೆಕ್ಯುಲರಿಸಂ ಹೆಸರಿನಲ್ಲಿ ನಮ್ಮ ವಾದಕ್ಕೆ ಮನ್ನಣೆ ಸಿಕ್ಕಿಲ್ಲ
"ಹಿಂದೂ ಧಾರ್ಮಿಕ ನಂಬಿಕೆ" ವಿಚಾರದಲ್ಲಿ ನ್ಯಾಯ ಸಿಗಬಹದೂ ಎಂದು ನಾನು ಕೋರ್ಟ್ ಗೆ ಹೋಗಿದ್ದೆ. ಆದ್ರೆ, ಸೆಕ್ಯುಲರ್ ಹೆಸರಿನಲ್ಲಿ ಸಣ್ಣ ಪರದೆಯೊಳಗೆ ನನ್ನ ಅರ್ಜಿ ವಜಾ ಮಾಡಿದ್ದಾರೆ. ಉಚ್ಚ ನ್ಯಾಯಾಲಯದ ಬಗ್ಗೆ ಏನನ್ನು ಹೇಳಲ್ಲ. 2023ರ ಜನಸಾಹಿತ್ಯದ ಸಮ್ಮೇಳನದಲ್ಲಿ ಭುವನೇಶ್ವರಿ, ಅರಿಶಿನ ಕುಂಕುಮದ ಬಗ್ಗೆ ತಗಾದೆ ಎತ್ತಿರುವುದನ್ನು ತೋರಿಸಿದ್ವಿ. ಆದರೂ ಸೆಕ್ಯಲರಿಸಮ್ ಹೆಸರಿನಲ್ಲಿ ನಮ್ಮ ವಾದಕ್ಕೆ ಮನ್ನಣೆ ಕೊಟ್ಟಿಲ್ಲ. ಅಭಿಪ್ರಾಯ ಬೇಧ ವ್ಯಕ್ತಪಡಿಸುವ ಹೆಸರಿನಲ್ಲಿ ಅರ್ಜಿ ವಜಾ ಮಾಡಿದ್ದಾರೆ ಎಂದು ಹೇಳಿದರು.
ಅಧಿಕಾರಕ್ಕೆ ಬಂದರೆ ಹೊಸ ಕಾನೂನು
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಸರಾವನ್ನು ಹೇಗೆ ಆಯೋಜಿಸಬೇಕು ಮತ್ತು ಅದನ್ನು ಯಾರು ಉದ್ಘಾಟಿಸಬೇಕು ಎಂಬುದರ ಕುರಿತು ಕಾನೂನನ್ನು ಜಾರಿಗೆ ತರುತ್ತೇವೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
"ನ್ಯಾಯಾಲಯದ ತೀರ್ಪು ಸರ್ಕಾರವು ಆಯೋಜಿಸುವ ಉತ್ಸವವು ನಾಡ ಹಬ್ಬವಾಗಿದ್ದು, ಸರ್ಕಾರವು ತಾನು ಆಯ್ಕೆ ಮಾಡಿದ ಯಾರನ್ನಾದರೂ ಉದ್ಘಾಟನೆಗೆ ಆಹ್ವಾನಿಸುವ ಹಕ್ಕನ್ನು ಹೊಂದಿದೆ ಎಂಬ ನಿಲುವಿಗೆ ಸಂಬಂಧಿಸಿರಬಹುದು. ಆದರೆ ದಸರಾವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಯಾವುದೇ ಕಾನೂನು ಇಲ್ಲ. ಆದ್ದರಿಂದ, ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ನಾವು(ಅಧಿಕಾರಕ್ಕೆ ಬಂದ ನಂತರ) ಕಾನೂನನ್ನು ತರುತ್ತೇವೆ" ಎಂದು ಅವರು ಹೇಳಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಮಾಡಿರೋ ಅವಾಂತರ ಗಳೆಲ್ಲವನ್ನು ತೆಗೆದುಹಾಕುತ್ತೇವೆ. ಸಿದ್ದರಾಮಯ್ಯ ಬಂದ ಮೇಲೆ ಇದು ತಾಲಿಬಾನ್, ಮುಲ್ಲಾಗಳ ಸರ್ಕಾರ ಆಗಿದೆ ಅಶೋಕ್ ಕಿಡಿಕಾರಿದರು.
ಜನರು, ಸಿದ್ದರಾಮಯ್ಯ ಈ ರೀತಿ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ. ಮುಸ್ಲಿಂರ ಹಬ್ಬಕ್ಕೆ ಹೋಗಿ ಇದು ನಾಡಹಬ್ಬ ಅಂತ ಹೇಳಲಿ. ನಾಳೆ ಮುಸ್ಲಿಂರ ಹಬ್ಬಗಳಿಗೆಲ್ಲಾ ನಾವು ಹಿಂದುಗಳನ್ನು ಕರೆದುಕೊಂಡು ಹೋಗಿ ಉದ್ಘಾಟನೆ ಮಾಡಿಸ್ತೀವಿ. ಗಣೇಶ ದೇವಸ್ಥಾನದ ಮುಂದೆ ಮುಸ್ಲಿಂರ ಮೆರವಣಿಗೆ ಹೋಗಬಹುದು. ಅದೇ ಮಸೀದಿ ಮುಂದೆ ಗಣೇಶ ಮೆರವಣಿಗೆ ಯಾಕೆ ಹೋಗಬಾರದು. ಇದು ಸಿದ್ದರಾಮಯ್ಯರ ಎಡಬಿಡಂಗಿತನ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
Advertisement