
ಬೆಂಗಳೂರು: ಕರ್ನಾಟಕ ಸರ್ಕಾರ ವ್ಯಾಪ್ತಿಯ ನಾನಾ ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕ ಸಂಬಂಧ ಎಐಸಿಸಿ ಅನುಮೋದಿತ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲವೊಂದು ಬದಲಾವಣೆ ಮಾಡಿದ್ದಾರೆ. ಇಲಾಖಾವಾರು ಆದೇಶ ಹೊರಡಿಸಲು ಶುಕ್ರವಾರ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ವಿವಿಧ ಮಂಡಳಿಗಳು ಮತ್ತು ನಿಗಮಗಳ ಅಧ್ಯಕ್ಷರನ್ನಾಗಿ ಪ್ರಸ್ತಾಪಿಸಿದ 39 ಹೆಸರುಗಳಲ್ಲಿ ಏಳು ಹೆಸರುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಬಿಟ್ಟಿದ್ದಾರೆ. ಈ ವಾರದ ಆರಂಭದಲ್ಲಿ, ಕಾಂಗ್ರೆಸ್ 39 ಪಕ್ಷದ ನಾಯಕರ ಹೆಸರುಗಳನ್ನು ಮಂಡಳಿಗಳು ಮತ್ತು ನಿಗಮಗಳ ಅಧ್ಯಕ್ಷರನ್ನಾಗಿ ಅಂತಿಮಗೊಳಿಸಿತು ಒಟ್ಟು 34 ಮಂದಿ ಅಧ್ಯಕ್ಷರ ನೇಮಕಕ್ಕೆ ಸೂಚಿಸಲಾಗಿದ್ದು, ಈ ಕುರಿತ ಆದೇಶ ಹೊರಡಿಸಿದ ದಿನದಿಂದ ಮುಂದಿನ 2 ವರ್ಷಗಳ ಅವಧಿಗೆ ನೇಮಕ ಮಾಡುವಂತೆ ನಿರ್ದೇಶನ ನೀಡಿದ್ದಾರೆ.
ಈ ಪಟ್ಟಿಯಿಂದ, ಸಿದ್ದರಾಮಯ್ಯ ಅವರು ನೀಲಕಂಠ ಮುಲ್ಗೆ (ಕೆಕೆಆರ್‌ಟಿಸಿ), ಸೈಯದ್ ಮೆಹಮೂದ್ ಚಿಸ್ಟಿ (ದ್ವಿದಳ ಧಾನ್ಯಗಳ ಅಭಿವೃದ್ಧಿ ನಿಗಮ), ಬಿ ಎಸ್ ಕವಲಗಿ (ನಿಂಬೆ ಅಭಿವೃದ್ಧಿ ಮಂಡಳಿ), ಅಂಜನಪ್ಪ (ಬೀಜ ಅಭಿವೃದ್ಧಿ ನಿಗಮ), ಶರಣಪ್ಪ ಸಲಾದ್‌ಪುರ (ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ಮಂಡಳಿ), ಆರ್ ಎಸ್ ಸತ್ಯನಾರಾಯಣ (ತಾಪಮಾನ ಮಂಡಳಿ) ಮತ್ತು ಅನಿಲ್‌ಕುಮಾರ್ ಜಮಾದಾರ್ (ತೊಗರಿ ಅಭಿವೃದ್ಧಿ ನಿಗಮ) ಅವರನ್ನು ಕೈಬಿಟ್ಟಿದ್ದಾರೆ.
ಕಾಗವಾಡ ಶಾಸಕ ರಾಜು ಕಾಗೆ ಅಧ್ಯಕ್ಷರಾಗಿದ್ದ ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ ಅರುಣ್ ಕುಮಾರ್ ಪಾಟೀಲ್ ಹೆಸರನ್ನು ಎಐಸಿಸಿ ಪಟ್ಟಿ ಮಾಡಿತ್ತು. ಇದು ಮುದ್ರಣ ದೋಷ ಎಂಬ ಸ್ಪಷ್ಟನೆಯೊಂದಿಗೆ ಅರುಣ್ ಪಾಟೀಲ್‌ರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹುದ್ದೆಗೆ ನೇಮಕಕ್ಕೆ ಸೂಚಿಸಲಾಗಿದೆ. ರಾಜು ಕಾಗೆ ಹುದ್ದೆ ಅಬಾಧಿತವಾಗಿದೆ. ಆದರೆ, ಎಐಸಿಸಿ ಅನುಮೋದಿತ ಪಟ್ಟಿಯಲ್ಲಿಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ನೀಲಕಂಠ ಮುಳ್ಗೆ ಅವರನ್ನು ಶಿಫಾರಸು ಮಾಡಲಾಗಿತ್ತು.
ಎಐಸಿಸಿ ಅನುಮೋದನೆ ನೀಡಿದ್ದ ಪಟ್ಟಿಯಲ್ಲಿ ಇಲ್ಲದಿದ್ದರೂ ತುಮಕೂರು ಮೂಲದ ಎಂ.ನಿಕೇತ್ ರಾಜ್ ಅವರನ್ನು ಬಿಎಂಟಿಸಿ ಅಧ್ಯಕ್ಷರಾಗಿ ನೇಮಕ ಮಾಡಿದ್ದು, ಎಚ್.ಡಿ.ಗಣೇಶ್ ಅವರನ್ನು ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್‌ನ ಅಧ್ಯಕ್ಷರಾಗಿ ನೇಮಿಸಲಾಗಿದೆ. ಇದು ಹೊಸ ಸೇರ್ಪಡೆಯಾಗಿದೆ.
ಹತ್ತು ನಿಗಮ, ಮಂಡಳಿಗಳಿಗೆ ಉಪಾಧ್ಯಕ್ಷರ ನೇಮಕಕ್ಕೂ ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ. ಶಾಸಕ ವಿಶ್ವಾಸ್ ವಸಂತ ವೈದ್ಯ ಅವರನ್ನು ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ಅವರನ್ನು ನ್ಯಾಷನಲ್ ಮಿಲಿಟರಿ ಮೆಮೋರಿಯಲ್ ಮ್ಯಾನೇಜ್‌ಮೆಂಟ್ ಟ್ರಸ್ಟ್‌ನ ಉಪಾಧ್ಯಕ್ಷ ಹಾಗೂ ಐಶ್ವರ್ಯಾ ಮಹಾದೇವ ಅವರಿಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಹುದ್ದೆಗೆ ನೇಮಕ ಮಾಡುವಂತೆ ಶಿಫಾರಸು ಮಾಡಲಾಗಿದೆ.
ನ್ಯಾಷನಲ್ ಮಿಲಿಟರಿ ಮೆಮೋರಿಯಲ್ ಮ್ಯಾನೇಜ್‌ಮೆಂಟ್ ಟ್ರಸ್ಟ್‌ಗೆ ಏರ್‌ವೈಸ್ ಮಾರ್ಷಲ್ ಅಜೀಜ್ ಜಾವೀದ್, ಲೆಫ್ಟಿನೆಂಟರ್ ಜನರಲ್ ಬಿ.ಎನ್.ಬಿ.ಎಂ.ಪ್ರಸಾದ್, ಕರ್ನಲ್ ಮಲ್ಲಿಕಾರ್ಜುನ ಟಿ ನಿರುಪಾ ಮಾದಪ್ಪ ಮತ್ತು ರೀನಾ ಮುತ್ತಣ್ಣ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಈ ಹಿಂದೆ ಎಐಸಿಸಿ ಅನುಮೋದಿಸಿದ್ದ 32 ನಿಗಮ–ಮಂಡಳಿಗಳ ಅಧ್ಯಕ್ಷರ ನೇಮಕದ ಪಟ್ಟಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸುವಂತೆಯೂ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.
Advertisement