
ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿನಿಯ ಸಾವಿಗೆ ಗುಂಡಿಗಳೇ ಕಾರಣ ಎಂಬ ಬಿಜೆಪಿ ಆರೋಪವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಈ ಹೇಳಿಕೆ "ಫೇಕ್" ಎಂದು ಟೀಕಿಸಿದ್ದಾರೆ.
ನಿನ್ನೆ ಬೂದಿಗೆರೆ ಕ್ರಾಸ್ ಬಳಿ ರಸ್ತೆ ಗುಂಡಿ ತಪ್ಪಿಸುವ ಯತ್ನದಲ್ಲಿ ನಿಯಂತ್ರಣ ತಪ್ಪಿ ಬಿದ್ದ ಬಿ.ಕಾಂ ವಿದ್ಯಾರ್ಥಿನಿ ಮೇಲೆ ಲಾರಿ ಹರಿದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಅಪಘಾತಕ್ಕೆ ರಸ್ತೆ ಗುಂಡಿಯೇ ಕಾರಣ ಎಂದು ಬಿಜೆಪಿ ಆರೋಪಿಸಿದ್ದು, ಇಂದು ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, "ಇದೆಲ್ಲವೂ ಸುಳ್ಳು. ಅವರು ಕೇವಲ ಸುಳ್ಳು ಹರಡುತ್ತಿದ್ದಾರೆ. ಅವರ(ಬಿಜೆಪಿ) ಕಾರಣದಿಂದಾಗಿ ಇದೆಲ್ಲವೂ ಸೃಷ್ಟಿಯಾಗಿದೆ ಎಂದು ತಿರುಗೇಟು ನೀಡಿದರು.
"ಸಿಲಿಕಾನ್ ಸಿಟಿಯ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದರಿಂದ ವಿದ್ಯಾರ್ಥಿನಿಯೊಬ್ಬಳು ಪ್ರಾಣ ಕಳೆದುಕೊಂಡಿರುವುದು ದುರದೃಷ್ಟಕರ" ಎಂದು ಬಿಜೆಪಿ X ನಲ್ಲಿ ಪೋಸ್ಟ್ ಮಾಡಿದೆ.
ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದ್ದ ಬೆಂಗಳೂರಿನ ರಸ್ತೆಗಳು ಪ್ರತಿದಿನ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಿವೆ. ಇದು ಡಿ ಕೆ ಶಿವಕುಮಾರ್ ಅವರ ಕಳಪೆ ಕಾರ್ಯಕ್ಷಮತೆಯನ್ನು ಬಹಿರಂಗಪಡಿಸುತ್ತದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿತ್ತು.
ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ಇತ್ತೀಚೆಗೆ ನೀಡಲಾದ ಗಡುವು ಮತ್ತು ಈ ಉದ್ದೇಶಕ್ಕಾಗಿ ನಿಗದಿಪಡಿಸಿದ 750 ಕೋಟಿ ರೂ.ಗಳ ಬಳಕೆಯ ಬಗ್ಗೆಯೂ ಬಿಜೆಪಿ, ಡಿಸಿಎಂ ಶಿವಕುಮಾರ್ ಅವರನ್ನು ಪ್ರಶ್ನಿಸಿದೆ.
"ನೀವು ಅಧಿಕಾರಿಗಳಿಗೆ ನೀಡಿದ್ದ ಗಡುವು ಏನಾಯಿತು? 750 ಕೋಟಿ ರೂ.ಗಳು ಯಾರ ಜೇಬಿಗೆ ಹೋಗಿದೆ? ನಿಮ್ಮ ಸರ್ಕಾರ ಇನ್ನೂ ಎಷ್ಟು ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತದೆ?" ಎಂದು ಕೇಸರಿ ಪಕ್ಷ ಪ್ರಶ್ನಿಸಿದೆ.
Advertisement