

ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಆರ್. ಅಶೋಕ್, ಸಿದ್ದರಾಮಯ್ಯ ಮತ್ತು ಡಿಕೆ ಜೋಡೆತ್ತುಗಳಲ್ಲ, ಕುಂಟೆತ್ತುಗಳು ಎಂದು ತಿವಿದಿದ್ದಾರೆ.
ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಒಬ್ಬರ ದಾರಿಗೆ ಮತ್ತೊಬ್ಬರು ಬರಲ್ಲ. ಹೀಗಾಗಿ ಕುಂಟೆತ್ತುಗಳು ಬೇಡವೆಂದು ಜನ ತೀರ್ಮಾನಿಸಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಹೆಚ್ಚು ಸಾಲ ಮಾಡದೆ ಅಭಿವೃದ್ಧಿಗೆ ಒತ್ತು ನೀಡಿದ್ದೆವು. ಆದರೆ ಈ ಸರ್ಕಾರ 3 ವರ್ಷಗಳಿಂದ ಯಾವುದೇ ಅಭಿವೃದ್ಧಿ ಮಾಡಿಲ್ಲ.
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿದೆ. ಹೀಗಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಎಲ್ಲವನ್ನೂ ಜಾಸ್ತಿ ಮಾಡಿದೆ. ಉಪ ಚುನಾವಣೆ ಬಳಿಕ ಜನರ ಮೇಲೆ ಎಲ್ಲಾ ತೆರಿಗೆ ಹಾಕಲಿದ್ದು, ಜನ ಕಾಂಗ್ರೆಸ್ ಸರ್ಕಾರಕ್ಕೆ ಈಗ ಬುದ್ಧಿ ಕಲಿಸಬೇಕು ಎಂದಿದ್ದಾರೆ.
ಸಿದ್ದರಾಮಯ್ಯ ಸಮಾಜವಾದಿ ಅಲ್ಲ ಮಜಾ ರಾಮಯ್ಯ ಎಂದೂ ಕಿಡಿ ಕಾರಿರುವ ಅಶೋಕ್, ಕರ್ನಾಟಕದ ಆರ್ಥಿಕ ಪರಿಸ್ಥಿತಿ ಐಸಿಯುನಲ್ಲಿದೆ. ಸಿಎಂ ಸಿದ್ದರಾಮಯ್ಯ ಬ್ಲಾಕ್ ಮ್ಯಾಜಿಕ್ ಮಾಡಿದ್ದಾರೆ. ಆರ್ಥಿಕ ಶಿಸ್ತಿನ ರೇಖೆ ದಾಟಿದೆ, ಆದ್ರೆ ದಾಟಿಲ್ಲ ಎಂಬಂತೆ ತೋರಿಸ್ತಾರೆ.
ಗೃಹಲಕ್ಷ್ಮೀ ಯೋಜನೆ ಹಣ ಕೇವಲ 10 ತಿಂಗಳು ನೀಡಿ, ಎರಡು ತಿಂಗಳಿನದ್ದನ್ನು ದೋಚಿದ್ದಾರೆ. ರಾಜ್ಯದಿಂದ ವರ್ಷಕ್ಕೆ 45,600 ಕೋಟಿ ಬಡ್ಡಿ ಕಟ್ಟಬೇಕಿದ್ದು, ಪ್ರತಿ ದಿನಕ್ಕೆ 125 ಕೋಟಿ ಹಣ ಬಡ್ಡಿ ಭರಿಸಬೇಕಿದೆ. ಸಿಎಂ ಸಿದ್ದರಾಮಯ್ಯ ಸಾಲಗಾರ ಆಗಿದ್ದು, ರಾಜ್ಯದ ಜನರು ಈ ಸರ್ಕಾರ ಕಿತ್ತೊಗೆಯುವ ಹಾದಿಯಲ್ಲಿದ್ದಾರೆ ಎಂದು ಅಶೋಕ್ ಭವಿಷ್ಯ ನುಡಿದಿದ್ದಾರೆ.
ಇನ್ನೂ ಬಿಜೆಪಿಗರು ಕಳ್ಳೆತ್ತು ಇದ್ದಂಗೆ ರಾಜ್ಯದಲ್ಲಿ ಉಳುಮೆ ಮಾಡುವ ಎತ್ತುಗಳು ಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡೀದ ಚಲವಾದಿ ನಾರಾಯಣಸ್ವಾಮಿ ಅವರು, ಸಿದ್ದರಾಮಯ್ಯನವರು ಎತ್ತುಗಳಿಗೆ ದೋಖಾ ಮಾಡಿಯೇ ಬಂದವರು. ಅವರು ಮೊದಲು ಇದ್ದ ಪಕ್ಷದ ಚಿಹ್ನೆ ಯಾವುದು? ಅಲ್ಲಿ ದೋಖಾ ಮಾಡಿ ಕೈ ಹಿಡಕೊಂಡು ಬಂದವರು. ಈ ಕೈ ಕತ್ತರಿಸಿದ ಕೈ, ತುಂಡರಿಸಿದ ಕೈ ಅದು.
ಆಕ್ಸಿಡೆಂಟ್ ಆದಾಗ ತುಂಡಾಗಿ ಬಿದ್ದಿರುತ್ತದಲ್ಲ ಆ ಕೈ. ಈಗ ಅದಕ್ಕೆ ಜೀವ ಇಲ್ಲ ಅದು ನಿರ್ಜೀವ ಕೈ. ಅದರಿಂದ ಏನೂ ಆಗುವುದಿಲ್ಲ, ನಾವು ಕಳ್ಳೆತ್ತು ಅಲ್ಲ ಸುಳ್ಳೆತ್ತೂ ಅಲ್ಲ, ನಿಮ್ಮಂತಹ ಕಳ್ಳೆತ್ತು ದೇಶದಲ್ಲೇ ಇಲ್ಲ. ಹೀಗಾಗಿ ಮುಂದೆ ದೇಶದಿಂದಲೇ ನೀವು ಕಣ್ಮರೆಯಾಗುವ ಪರಿಸ್ಥಿತಿ ಜನ ಎದುರು ನೋಡ್ತಾ ಇರುವಾಗ ಅದರ ಬಗ್ಗೆ ಏನು ಮಾತಾನಾಡ್ತೀರಿ? ಕಳ್ಳೆತ್ತುಗಳು ಅಂದ್ರೆ ಕಾಂಗ್ರೆಸ್ ಪಕ್ಷವೇ ಎಂದು ತಿರುಗೇಟು ನೀಡಿದರು.
Advertisement