

ಕೋಲಾರ: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿದ್ದು, ಒಬ್ಬರು ನಾನೇ ಐದು ವರ್ಷ ಸಿಎಂ ಎನ್ನುತ್ತಾರೆ. ಮತ್ತೊಬ್ಬರು ನನಗೆ ಎರಡೂವರೆ ವರ್ಷ ನಿಗದಿಯಾಗಿತ್ತು ಎನ್ನುತ್ತಾರೆ. ಪ್ರತಿನಿತ್ಯ ಇದನ್ನು ಬಿಟ್ಟರೆ ರಾಜ್ಯದಲ್ಲಿ ಯಾವ ಸಮಸ್ಯೆ ಚರ್ಚೆಯಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮುಖ್ಯಮಂತ್ರಿ ಹುದ್ದೆಗಾಗಿ 40 ರಿಂದ 50 ಶಾಸಕರು ದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ರಾಜ್ಯದಲ್ಲಿ ಈಗ ಜನ ಎದುರಿಸುತ್ತಿರುವ ಕುಡಿಯುವ ನೀರು ಮತ್ತು ಬಿಸಿಲಿನಂತಹ ಗಂಭೀರ ಸಮಸ್ಯೆಗಳ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.
ಇದೇ ವೇಳೆ ಅಳಂದದ ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಕುಮಾರಸ್ವಾಮಿ, ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಒಂದು ರೂಪಾಯಿಯೂ ಇಲ್ಲ, ಪಿಡಿಓಗಳು ಲಭ್ಯ ಇಲ್ಲ ಎಂದು ಬಿ.ಆರ್. ಪಾಟೀಲ್ ಹೇಳಿದ್ದಾರೆ. ಇದು ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಎಂದು ಅವರು ವಿವರಿಸಿದರು.
ಇತ್ತೀಚೆಗೆ ಅಲ್ಲಲ್ಲಿ ಆಲಿಕಲ್ಲು ಮಳೆ ಬಿದ್ದು ಹಲವಾರು ಭಾಗದಲ್ಲಿ ಬಾಳೆ, ದ್ರಾಕ್ಷಿ, ದಾಳಿಂಬೆ ಬೆಳೆ ನಾಶವಾದರೂ ಯಾವುದರ ಬಗ್ಗೆಯೂ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
Advertisement