ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ; ಬನ್ನಿ ಅಖಾಡಕ್ಕೆ, ಬಳ್ಳಾರಿಯಲ್ಲಿ ನೀವು ರಿಜೆಕ್ಟ್ ಪೀಸ್‌ಗಳು: ರಾಮುಲು, ರೆಡ್ಡಿಗೆ ನಾಗೇಂದ್ರ ಸವಾಲು

ನನ್ನ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಬನ್ನಿ ಜನತಾ ನ್ಯಾಯಾಲಯಕ್ಕೆ ಹೋಗೋಣ. ತಾಕತ್ತಿದ್ದರೆ ಎದುರಿಸಿ ಎಂದು ಬಿಜೆಪಿಗೆ ಬಹಿರಂಗ ಸವಾಲು ಹಾಕಿದ್ದಾರೆ.
Minister B Nagendra Resigns Amid Valmiki Scam Allegations
ನಾಗೇಂದ್ರ
Updated on

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ದುರುಪಯೋಗದ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಅವರು ಶುಕ್ರವಾರ ಸಂಜೆ ಕೊನೆಗೂ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸದನದ ಒಳಗೆ ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸಿದ್ದ ಬಿಜೆಪಿ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

ಇಂದು ಮಧ್ಯಾಹ್ನ ದೆಹಲಿಯಿಂದ ಆಗಮಿಸಿದ ಬಳಿಕ ಸಂಜೆ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ನಾಗೇಂದ್ರ, ಮನುವಾದಿಗಳ ಕುತಂತ್ರದಿಂದ ನಾನು ಮೂರು ತಿಂಗಳು ಜೈಲಿಗೆ ಹೋಗಿದ್ದೆ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪಕ್ಷಕ್ಕೆ ಮುಜುಗರ ಆಗಬಾರದು ಅಂತಾ ಸ್ವಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ನಾಗೇಂದ್ರ ಅವರು ಭಾವುಕರಾಗಿ ಕಣ್ಣೀರು ಹಾಕಿದರು. ಅಲ್ಲದೆ ನನ್ನ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಬನ್ನಿ ಜನತಾ ನ್ಯಾಯಾಲಯಕ್ಕೆ ಹೋಗೋಣ. ತಾಕತ್ತಿದ್ದರೆ ಎದುರಿಸಿ ಎಂದು ಬಿಜೆಪಿಗೆ ಬಹಿರಂಗ ಸವಾಲು ಕೂಡ ಹಾಕಿದ್ದಾರೆ.

Minister B Nagendra Resigns Amid Valmiki Scam Allegations
ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಪತನ: ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ; BJP ಹೋರಾಟಕ್ಕೆ ಜಯ!

ವಿರೋಧ ಪಕ್ಷದವರಿಂದ ಕುತಂತ್ರ ರಾಜಕಾರಣ ನಡೆಯುತ್ತಿದೆ. ಸದನದಲ್ಲಿ ಹಲವು ಬಾರಿ ಮನವಿ ಮಾಡಿಕೊಂಡೆವು, ನೋಟಿಸ್ ಕೊಡಿ. ಚರ್ಚೆಗೆ ಬನ್ನಿ ಎಂದು ಕೇಳಿಕೊಂಡೆವು, ಆದರೂ ಅವರು ಚರ್ಚೆಗೆ ಬರಲಿಲ್ಲ. ಈಗ ಇಶ್ಯೂಲೆಸ್ ಇಶ್ಯೂ ಇಟ್ಟುಕೊಂಡು ಪಾದಯಾತ್ರೆಗೆ ಹೊರಟಿದ್ದಾರೆ. ಬಿಜೆಪಿಯವರು ಮನುಸ್ಮೃತಿಯ ವಾದ ಮಾಡುತ್ತಿದ್ದು, ಸಂವಿಧಾನ ನಮಗೆಲ್ಲಾ ರಕ್ಷಣೆ ಮಾಡುತ್ತದೆ ಎಂಬ ನಂಬಿಕೆ ಇದೆ ಎಂದು ವಾಗ್ದಾಳಿ ನಡೆಸಿದರು.

ನಾನು ದಲಿತ ಅನ್ನೋ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ದಲಿತರು, ಬಡವರು ಹಾಗೂ ಆದಿವಾಸಿಗಳು ಬದುಕಬಾರದು ಎಂಬ ಮನಸ್ಥಿತಿಯನ್ನು ಬಿಜೆಪಿಗರು ಹೊಂದಿದ್ದಾರೆ. 2024ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ವಿನಾಕಾರಣ ನನ್ನನ್ನು ಬಂಧಿಸಿ ಮೂರು ತಿಂಗಳು ಜೈಲಿಗೆ ಹಾಕಿದ್ರು. ಬಳಿಕ ಕೋರ್ಟ್​ನಿಂದ ಜಾಮೀನು ಪಡೆದು ಹೊರಗೆ ಬಂದಿದ್ದೇನೆ. ಮನುವಾದಿಗಳ ಕುತಂತ್ರಕ್ಕೆ ನಾನು ಬಗ್ಗುವುದಿಲ್ಲ. ನಾನು ಸಂವಿಧಾನಕ್ಕೆ ತಲೆ ಬಾಗುತ್ತೇನೆ ನಾಗೇಂದ್ರ ತಿಳಿಸಿದರು.

ಇದೇ ವೇಳೆ ಬಳ್ಳಾರಿಯಲ್ಲಿ ಸೋ ಕಾಲ್ಡ್ ಲೀಡರ್‌ಗಳಿದ್ದೀರಲ್ಲ ಬನ್ನಿ ಅಖಾಡಕ್ಕೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಾದ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರಿಗೆ ಸವಾಲು ಹಾಕುತ್ತೇನೆ, ತಾಕತ್ತಿದ್ದರೆ ನಮ್ಮ ಪಕ್ಷವನ್ನು ಎದುರಿಸಿ. ಇಡಿ, ಸಿಬಿಐ ಬಿಟ್ಟು ಕೇಸ್ ಹಾಕಿಸ್ತಾರೆ, ನಿಮ್ಮ ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ. ರೆಡ್ಡಿ, ರಾಮುಲು ಬರಲಿ, ಜನತಾ ನ್ಯಾಯಾಲಯಕ್ಕೆ ಹೋಗೋಣ. ಬಳ್ಳಾರಿಯಲ್ಲಿ ನೀವು ರಿಜೆಕ್ಟ್ ಪೀಸ್‌ಗಳು, ಚಲಾವಣೆ ಇಲ್ಲದ ನಾಣ್ಯಗಳು ಎಂದವರು ವಾಗ್ದಾಳಿ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com