

ಮಂಡ್ಯ: ಪಕ್ಷಕ್ಕೆ ಆಗುವ ಮುಜುಗರ ತಪ್ಪಿಸಲು ಬಿ. ನಾಗೇಂದ್ರ ರಾಜೀನಾಮೆ ಎಂದಿದ್ದಾರೆ ಆದರೆ, ಯಾವ ಕಾರಣಕ್ಕೆ ಕಾಂಗ್ರೆಸ್ ಗೆ ಮುಜುಗರ ಆಗುತ್ತಿದೆ. 87 ಕೋಟಿ ಹಗರಣದ ಮುಜುಗರ ತಪ್ಪಿಸಲು ರಾಜೀನಾಮೆ ಕೊಟ್ಟಿದ್ದಾ? ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಕಾಲೆಳೆದರು.
ಮಂಡ್ಯದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದಡಿ ಕುಮಾರಸ್ವಾಮಿ, ಹೆಚ್ ಡಿಕೆ ಮೇಲೆ ಆರೋಪ ಇಲ್ವಾ ಎಂದು ನಾಗೇಂದ್ರ ಹೇಳಿದ್ದಾರೆ. ನನ್ನ ಮೇಲೆ ಇರೋದು ರಾಜಕೀಯ ಆರೋಪ. ನಾನು ದುಡ್ಡು ಹೊಡೆದಿದ್ದೇನೆ ಎಂದು ಎಲ್ಲೂ ಇಲ್ಲ. ನನ್ನ ಮೇಲಿರುವುದು14 ವರ್ಷಗಳ ಹಿಂದಿನ ಆರೋಪ. ನಾನು ಎರಡು ಬಾರಿ ಸಿಎಂ ಆಗಿದ್ದಾಗ ಮುಚ್ಚಿ ಹಾಕಬಹುದಿತ್ತು. ಕುಮಾರಸ್ವಾಮಿ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಆರೋಪ ಮಾಡಿದವರು ತನಿಖೆ ನಡೆಸಲಿ ಎಂದು ಬಿಟ್ಟಿದ್ದೇನೆ ಎಂದಿದ್ದಾರೆ.
ಹಗರಣ ಮಾಡಿದ್ರೆ ರಾಜೀನಾಮೆ ನೀಡುತ್ತೇನೆ ಎಂಬ ಸಚಿವ ಬಾಲಕೃಷ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಚ್ ಡಿ ಕುಮಾರಸ್ವಾಮಿ, ಸರ್ಕಾರದ ಹಣ ಖರ್ಚು ಮಾಡಿ ಅಭಿವೃದ್ದಿ ಕಾರ್ಯಕ್ರಮ ಮಾಡಬೇಕಿತ್ತು. ಆಗ 600 ಕೋಟಿ ಅವ್ಯವಹಾರ ಆಗಿದೆ ಎಂದು ಸಮಿತಿ ಮಾಡಿದರು.
ಅಭಿವೃದ್ದಿ ಹೆಸರಿನಲ್ಲಿ ಲೂಟಿ ಆಗಿದೆ ಎಂದು ಸಮಿತಿ ರಚಿಸಿದ್ದರು. ಆದರೆ ಆ ಸದನ ಸಮಿತಿ ವರದಿ ಕೊಟ್ರಾ? ಆ ವರದಿಯಲ್ಲಿ ಏನಿದೆ? ಬಹಳ ಜನ ರಾಜೀನಾಮೆ ಕೊಡುತ್ತೀನಿ ಅಂತೇಳಿ ಹೇಗಿದ್ದಾರೆ ನೋಡಿ ಎಂದು ಟಾಂಗ್ ಕೊಟ್ಟರು.
2022 ರಲ್ಲಿ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಲಾಯಿತು. 2024 ರೊಳಗೆ ಉದ್ಯೋಗಗಳನ್ನು ನೀಡಬೇಕಾಗಿತ್ತು. ಅಕ್ರಮಗಳ ವರದಿಯ ನಂತರ, ನೀವು ಉದ್ಯೋಗಗಳನ್ನು ಹೇಗೆ ನೀಡಿದ್ದೀರಿ? ಭ್ರಷ್ಟಾಚಾರದ ಆರೋಪಗಳ ಹೊರತಾಗಿಯೂ ನೀವು ಅವರಿಗೆ ಏಕೆ ನೀಡಿದ್ದೀರಿ? ಕೆಪಿಎಸ್‌ಸಿ ಆಯೋಗ ವರದಿ ನೀಡಿತು, ನೀವು ಏನು ಮಾಡಿದ್ದೀರಿ? ಸರ್ಕಾರ ನ್ಯಾಯಾಲಯಕ್ಕೆ ಏಕೆ ಹೋಗಿಲ್ಲ? ವಕೀಲರನ್ನು ಏಕೆ ನೇಮಿಸಲಾಗಿಲ್ಲ? "ಇದು ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ" ಎಂದು ಕುಮಾರಸ್ವಾಮಿ ಆರೋಪಿಸಿದರು.
ನಾನು ಭೂಮಿ ಕೇಳುತ್ತಿದ್ದೇನೆ. ರೈತರ ಫಲವತ್ತಾದ ಕೃಷಿ ಭೂಮಿಯನ್ನು ನಾನು ಕೇಳುವುದಿಲ್ಲ. ಒಣ ಭೂಮಿಯನ್ನು ನೀಡಿ, ನಾನು ಸಕ್ಕರೆ ಕಾರ್ಖಾನೆಯನ್ನು ತರುತ್ತೇನೆ. ಭೂಮಿ ನೀಡಿದ ತಕ್ಷಣ ಕೆಲಸ ಆರಂಭವಾಗುತ್ತದೆ. ನಾನು ವಿಧಾನಸೌಧದಲ್ಲಿ ಸಭೆ ನಡೆಸಿದ್ದೇನೆ" ಎಂದು ಅವರು ಹೇಳಿದರು.
ನನ್ನ ಮುಂದೆ ಇದ್ದಾಗ ಕೆಲವು ಕಾಂಗ್ರೆಸ್ ಶಾಸಕರು ಅಣ್ಣ ಎಂದು ಕರೆಯುತ್ತಾರೆ. ಮಾಧ್ಯಮಗಳ ಮುಂದೆ ಅವರು ಏನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸುತ್ತಾರೆ. ಅವರು ಮಾತನಾಡಲಿ, ನಾನು ರಾಜಕೀಯ ಮಾಡುವುದಿಲ್ಲ, ಕಾಲವೇ ಎಲ್ಲವನ್ನು ನಿರ್ಧರಿಸುತ್ತದೆ. ಜಿಲ್ಲೆಯ ಜನರ ಆಕಾಂಕ್ಷೆಗಳನ್ನು ಈಡೇರಿಸಲು ನಾನು ಕೆಲಸ ಮಾಡುತ್ತೇನೆ" ಎಂದು ಅವರು ಹೇಳಿದರು.