

ಬೆಂಗಳೂರು: ಕಲಬುರಗಿ ರಿಪಬ್ಲಿಕ್ ನ ಈ ಸರ್ವಾಧಿಕಾರಿಯನ್ನು ಎರಡು ಬಾರಿ ಐಟಿ - ಬಿಟಿ ಸಚಿವನನ್ನಾಗಿ ಮಾಡಿದ್ದು, ಆಡುವ ಮಕ್ಕಳಿಗೆ ಮದುವೆ ಮಾಡಿದಂತಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಶಾಸಕ ಸುನೀಲ್ ಕುಮಾರ್ ಹರಿಹಾಯ್ದಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಮಾತಾಡುವವನೇ ಮಹಾಶೂರ " ಎಂಬುದನ್ನು ಬದುಕಿನ ಧ್ಯೇಯವಾಗಿಸಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ ಕಲಬುರ್ಗಿಯನ್ನು ಸಿಲಿಕಾನ್ ಸಿಟಿ ಮಾಡಿದವರಂತೆ ಪೋಸು ಕೊಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಇವರು ಅಧಿಕಾರಕ್ಕೆ ಬಂದ ನಂತರ ಇಡಿ ಕಲಬುರ್ಗಿ ವಿಭಾಗವೇ ಸುಡಾನ್ ದೇಶದ ರೀತಿ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎಂದಿದ್ದಾರೆ.
ಪ್ರಾದೇಶಿಕ ಅಸಮತೋಲನ ನಿವಾರಣೆಯ ಅಧ್ಯಯನಕ್ಕಾಗಿ ಸರ್ಕಾರ ನೇಮಿಸಿದ್ದ ಪ್ರೊ.ಗೋವಿಂದರಾವ್ ಸಮಿತಿಯ ವರದಿಯ ಪ್ರಕಾರ ಅಭಿವೃದ್ಧಿ ಮಾನದಂಡಗಳ ಆಧಾರದ ಮೇಲೆ ರಾಜ್ಯದಲ್ಲಿ ಎಂಟು ಜಿಲ್ಲೆಗಳನ್ನು ಅತ್ಯಂತ ಹಿಂದುಳಿದ ಎಂದು ಗುರುತಿಸಲಾಗಿದ್ದು, ಈ ಪೈಕಿ 6 ಕಲಬುರ್ಗಿ ವಿಭಾಗದಲ್ಲಿದೆ. ಕಲಬುರ್ಗಿ ವಿಭಾಗದ 51 ತಾಲೂಕುಗಳಲ್ಲಿ 39 ಅತ್ಯಂತ ಹಿಂದುಳಿದ, 9 ಅತಿ ಹಿಂದುಳಿದ ತಾಲೂಕು ಎಂದು ಪರಿಗಣಿಸಲ್ಪಟ್ಟಿದೆ.
ತನ್ನ ತವರು ಜಿಲ್ಲೆಯನ್ನೇ ಅಭಿವೃದ್ಧಿಪಡಿಸಲು ಸಾಧ್ಯವಾಗದ ವ್ಯಕ್ತಿ ಕೋಮುವಾದದ ಕಾರಣಕ್ಕೆ ಕರಾವಳಿಗೆ ಐಟಿ ಕಂಪನಿಗಳು ಬರುತ್ತಿಲ್ಲ ಎಂದು ಉಯಿಲಿಡುತ್ತಿದ್ದಾರೆ. ಆದರೆ ಕರಾವಳಿ ಜಿಲ್ಲೆಗಳು ಹಿಂದುಳಿದ ಜಿಲ್ಲೆಗಳಲ್ಲ, ಏಕೆಂದರೆ ಇಲ್ಲಿ ಖರ್ಗೆ ಕುಟುಂಬ ಪಾರುಪಥ್ಯ ಸ್ಥಾಪಿಸಿಲ್ಲ
ಹೀಗಾಗಿ ಪ್ರಿಯಾಂಕ ಖರ್ಗೆ ಅಭಿವೃದ್ಧಿ ವಿಚಾರವನ್ನು ಮಾತನಾಡುವುದಕ್ಕೆ ಮುನ್ನವೇ ಕರಾವಳಿಯಲ್ಲಿ MRPL, Airport , SEZ , Port, Infosys , MCF, ONGC ಯಂಥ ಸಂಸ್ಥೆಗಳು ಬಂದಿವೆ. ತಲಾದಾಯದಲ್ಲಿ ಬೆಂಗಳೂರು ನಂತರದ ಸ್ಥಾನದಲ್ಲಿ ಕರಾವಳಿ ಜಿಲ್ಲೆಗಳಿವೆ ಎಂದಿದ್ದಾರೆ.
ಸ್ವಾಮಿ ಪ್ರಿಯಾಂಕ ಖರ್ಗೆಯವರೇ, ನೀವು ಹಾಗೂ ನಿಮ್ಮ ಪಿತಾಶ್ರೀಯವರ ಎಪ್ಪತ್ತು ವರ್ಷಗಳ ಸರ್ವಾಧಿಕಾರದ ಫಲವಾಗಿ ಕಲಬುರ್ಗಿ ವಿಭಾಗದ ಜಿಲ್ಲೆಗಳು ರಕ್ತಕಣ್ಣೀರು ಸುರಿಸುತ್ತಿವೆ. ತಲಾದಾಯ ಹಾಗೂ ಶಿಕ್ಷಣದಲ್ಲಿ ನಿಮ್ಮ ವಿಭಾಗ ರಾಜ್ಯದಲ್ಲೇ ಕನಿಷ್ಠ ಸ್ಥಾನದಲ್ಲಿದೆ. ಇದಕ್ಕೆ ನಿಮ್ಮ ಉತ್ಕೃಷ್ಟ ಆಡಳಿತವೇ ಕಾರಣವಲ್ಲವೇ ? ಸಂವಿಧಾನದ ಆಶೋತ್ತರಗಳನ್ನು ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿರುವ ನೀವು " ಈದಿ ಅಮಿನ್ " ಮಾದರಿಯಲ್ಲಿ ಕಲ್ಬುರ್ಗಿಯ ಜನತೆಯ ಜೀವ ಹೀರುವ ದೆವ್ವಗಳಾಗಿದ್ದೀರಿ.
ಅದು ಸರಿ ನೀವು ಐಟಿ ಸಚಿವರಾದ ನಂತರ ಕಲಬುರ್ಗಿ ವಿಭಾಗದಲ್ಲಿ ಆದ ಐಟಿ ಬೆಳವಣಿಗೆ, ವಿದೇಶಿ ಬಂಡವಾಳ ಹೂಡಿಕೆ, ಉತ್ಕೃಷ್ಟತಾ ಕೇಂದ್ರಗಳ ಬಗ್ಗೆ ಸ್ವಲ್ಪ ವಿವರಣೆ ನೀಡಬಹುದಲ್ಲ ಎಂದು ಸವಾಲು ಹಾಕಿದ್ದಾರೆ.
Advertisement