

ಮಂಗಳೂರು: ಬಳ್ಳಾರಿಯಲ್ಲಿ ಫೈರಿಂಗ್ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಮಾಧ್ಯಮಗಳ ಮುಂದೆ ಪರಸ್ಪರ ಏಕವಚನದಲ್ಲಿ ಬೈದಾಡಿಕೊಳ್ಳುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ಯುಟಿ ಖಾದರ್ ಅವರು, ಶಾಸಕರು ಸಿನಿಮೀಯ ಶೈಲಿಯಲ್ಲಿ ಕಚ್ಚಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುಟಿ ಖಾದರ್ ಅವರು, ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ಗಲಾಟೆಯಾಗಿರುವುದು ಸರಿಯಲ್ಲ. ಎಲ್ಲರೂ ರಾಜಕೀಯ ಮಾಡಬೇಕು. ಆದರೆ ದ್ವೇಷದ ರಾಜಕಾರಣ ಮಾಡುವುದು ತಪ್ಪು. ಪರಸ್ಪರ ಏಕವಚನ ಬಳಕೆ ಕೂಡ ಸಮರ್ಥನೀಯವಲ್ಲ ಎಂದರು.
ಬಳ್ಳಾರಿಯಲ್ಲಿ ಇಬ್ಬರೂ ಶಾಸಕರಾಗಿದ್ದಾರೆ. ರಾಜಕಾರಣ ಮಾಡಬೇಕು. ಆದರೆ ಸೀನಿಮಾ ರೀತಿಯಲ್ಲಿ ಕಚ್ಚಾಡುವುದು. ದ್ವೇಷದ ರಾಜಕಾರಣ ಮಾಡುವುದು ಒಳ್ಳೆಯದಲ್ಲ. ಇಂತಹ ಘಟನೆಗಳು ಜನ ಪ್ರತಿನಿಧಿಗಳ ಮೇಲಿನ ಗೌರವವನ್ನು ಕಡಿಮೆ ಮಾಡುತ್ತವೆ. ಕೆಲವರ ನಡವಳಿಕೆಯಿಂದ ಎಲ್ಲಾ ರಾಜಕಾರಣಿಗಳಿಗೂ ಕಪ್ಪು ಚುಕ್ಕೆ ಬರುತ್ತದೆ ಎಂದು ಎಚ್ಚರಿಸಿದರು.
ಯುವ ಶಾಸಕರು ಸಂಯಮದಿಂದ ನಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅವರ ನಡುವಳಿಕೆ ಕುರಿತು ಎಚ್ಚರಿಕೆ ನೀಡಿದ ಸ್ಪೀಕರ್, ಸಮಾಜದ ನೆಮ್ಮದಿ ಕಾಪಾಡುವ ಸಲುವಾಗಿ ಜನರು ನಮನ್ನು ಚುನಾಯಿಸಿ ಕಳುಹಿಸಿದ್ದಾರೆ. ನಾವೇ ಮುಂದೆ ನಿಂತು ಗಲಾಟೆ ಮಾಡಿಸಿದರೆ, ಅದು ಸಮರ್ಥನೀಯವಲ್ಲ ಎಂದರು.
ರಾಜಕಾರಣಿಗಳಿಗೆ ಹಿಂದಿನ ದಿನಗಳಲ್ಲಿ ಒಳ್ಳೆಯ ಹೆಸರಿತ್ತು. ಆ ಸಂಸ್ಕೃತಿಯನ್ನು ನಾವು ಮರಳಿ ಪಾಲಿಸಬೇಕಿದೆ. ಬಳ್ಳಾರಿ ಘಟನೆಗೆ ಹೊಣೆ ಮಾಡಿ ಬಳ್ಳಾರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತ್ತು ಮಾಡಲು ಸರ್ಕಾರಕ್ಕೆ ತನ್ನದೇ ಆದ ಕಾರಣ ಇರಬಹುದು. ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಅವರು ಹೇಳಿದರು.
Advertisement