

ಬೆಂಗಳೂರು: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರ ಬೆಂಬಕ್ಕೆ ನಿಂತ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಬಿಜೆಪಿ ಶಾಸಕ ಜಿ ಜನಾರ್ದನ ರೆಡ್ಡಿ ಅವರಿಗೆ ಮತ್ತೆ ʻರಿಪಬ್ಲಿಕ್ ಆಫ್ ಬಳ್ಳಾರಿʼಮಾಡಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಶನಿವಾರ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತನ ಸಾವಿಗೆ ಕಾರಣವಾದ ಬಳ್ಳಾರಿ ಫೈರಿಂಗ್ ಘಟನೆಯ ನಂತರ ಖಾಸಗಿ ಬಂದೂಕುಗಳನ್ನು ಹೊಂದಲು ಅನುಮತಿ ನೀಡಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಡಿಸಿಎಂ ತಿಳಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, "ಯಾರ ಬಂದೂಕಿನಿಂದ ಗುಂಡು ಹಾರಿಸಲಾಗಿದೆ ಎಂದು ಪೊಲೀಸ್ ತನಿಖೆಯಿಂದ ಬಹಿರಂಗವಾಗಲಿದೆ" ಎಂದು ಹೇಳಿದರು.
"ನಮ್ಮ ಸರ್ಕಾರ ಮೊದಲ ಬಾರಿಗೆ ಬಳ್ಳಾರಿಯಲ್ಲಿ ವಾಲ್ಮೀಕಿ ಮಹರ್ಷಿಯವರ ಪುತ್ಥಳಿ ನಿರ್ಮಿಸುತ್ತಿದೆ. ನಮ್ಮ ಶಾಸಕರು ಅದರ ಜವಾಬ್ದಾರಿ ತೆಗೆದುಕೊಂಡಿದ್ದಾರೆ, ನಗರದ ಎಲ್ಲೆಡೆ ಅದರ ಪೋಸ್ಟರ್ ಗಳನ್ನು ಹಾಕಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
"ಕೆಲವೊಮ್ಮೆ, ಬಿಜೆಪಿ ಕಾರ್ಯಕರ್ತರು ಬೆಂಗಳೂರಿನಲ್ಲಿರುವ ನನ್ನ ಮನೆಯ ಮುಂದೆಯೂ ಪೋಸ್ಟರ್‌ಗಳನ್ನು ಹಾಕುತ್ತಾರೆ. 'ಅದನ್ನು ಮಾಡಬೇಡಿ' ಎಂದು ನಾನು ಹೇಳಬಹುದೇ? ಬಿಜೆಪಿಯವರು ಸಿಎಂ ನಿವಾಸದ ಮುಂದೆಯೂ ಪೋಸ್ಟರ್ ಹಾಕುತ್ತಾರೆ" ಎಂದು ಅವರು ಹೇಳಿದರು.
ಪೋಸ್ಟರ್ ಹಾಕಿದರೆ "ಏನು ಸಮಸ್ಯೆ? ನಿಮಗೆ(ಜನಾರ್ದನ ರೆಡ್ಡಿ) ಏನು ತೊಂದರೆಯಾಯಿತು? ವಾಲ್ಮೀಕಿ ಪ್ರತಿಮೆ ಉದ್ಘಾಟನೆಗಾಗಿ ನಾವು ಕಾರ್ಯಕ್ರಮ ಆಯೋಜಿಸುತ್ತಿದ್ದೆವು ಎಂದರು.
ನಿಮ್ಮ ಮನೆಯ ಮುಂಭಾಗದ ರಸ್ತೆ ಸರ್ಕಾರಿ ಆಸ್ತಿಯಾಗಿದೆ ಮತ್ತು ಪೋಸ್ಟರ್ ಅನ್ನು ಸರ್ಕಾರಿ ಆಸ್ತಿಯಲ್ಲಿ ಹಾಕಲಾಗಿದೆ. ಇದರಲ್ಲಿ ಯಾವ ಪಿತೂರಿ ಇದೆ? ಜಗಳವಾಡುವ ಅಗತ್ಯ ಏನಿತ್ತು?" "ನಾವು ಪಕ್ಷದ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ ಎಂದರು.
ನಮ್ಮ ಕಾರ್ಯಕರ್ತನನ್ನು ಕೊಲೆ ಮಾಡಲಾಗಿದೆ ಮತ್ತು ಅದಕ್ಕೆ ಬಿಜೆಪಿಯೇ ಕಾರಣ" ಎಂದು ಡಿಕೆ ಶಿವಕುಮಾರ್ ಆರೋಪಿಸಿದರು.
ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. "ಪೊಲೀಸ್ ತನಿಖೆ ನಡೆಯುತ್ತಿರುವಾಗ ನಾನು ಮಧ್ಯಪ್ರವೇಶಿಸಲು ಬಯಸುವುದಿಲ್ಲ ಎಂದರು.
“ಪಕ್ಷದ ವತಿಯಿಂದ ಈ ಘಟನೆ ಬಗ್ಗೆ ಅಧ್ಯಯನ ನಡೆಸಲು ಹೆಚ್.ಎಂ. ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ನಿಯೋಗ ಕಳುಹಿಸಿದ್ದೇವೆ. ಬಿಜೆಪಿಯವರಿಗೆ ಬಳ್ಳಾರಿಯಲ್ಲಿ ನಮ್ಮ ಪಕ್ಷದ ಗೆಲುವು ಅರಗಿಸಿಕೊಳ್ಳಲು ಆಗುತ್ತಿಲ್ಲ" ಎಂದು ಡಿಕೆ ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷ ನಮ್ಮ ಶಾಸಕ ಭರತ್ ರೆಡ್ಡಿ ಬೆನ್ನಿಗೆ ನಿಲ್ಲಲಿದೆ. ನಾವು ನಮ್ಮ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಇದಕ್ಕೆ ಕಾರಣ ಯಾರು ಎಂಬುದು ತನಿಖೆಯಿಂದ ಹೊರಬರಲಿದ್ದು, ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ ಎಂದರು.
ನನಗೆ ಈ ಘಟನೆ ತಿಳಿದ ತಕ್ಷಣೆ ಎಸ್ಪಿ ಜೊತೆ ಮಾತನಾಡಿದ್ದೇನೆ. ಎಸ್ಪಿ ಯಾವ ಪರಿಸ್ಥಿತಿಯಲ್ಲಿ ಮಾತನಾಡಿದರು ಎಂಬುದು ನನ್ನ ಅನುಭವಕ್ಕೇ ಬಂದಿದೆ. ಅವರು ಏನು ಉತ್ತರ ನೀಡಿದ್ದಾರೆ ಎಂಬುದು ಗೊತ್ತಿದೆ. ಈ ಹಿಂದೆ ಇದ್ದ ಎಸ್ಪಿ, ಐಜಿ ಮತ್ತು ಶಾಸಕರ ಜತೆಗೂ ಮಾತನಾಡಿದ್ದೇನೆ ಎಂದು ಡಿಸಿಎಂ ಹೇಳಿದ್ದಾರೆ.
ಜನಾರ್ದನ ರೆಡ್ಡಿ ಅವರು ದೊಡ್ಡ ಡ್ರಾಮಾ ಮಾಸ್ಟರ್. ಅವರು ಮೊದಲೇ ಸಿನಿಮಾ ನಿರ್ಮಾಪಕರಲ್ಲವೇ? ಡ್ರಾಮಾ ಮಾಡುತ್ತಾರೆ. ಕೋಟೆ ನಿರ್ಮಿಸಿಕೊಂಡು ನೂರು ಜನ ಭದ್ರತಾ ಸಿಬ್ಬಂದಿ ಹೊಂದಿರುವವರನ್ನು ಯಾರು ಹತ್ಯೆ ಮಾಡಲು ಸಾಧ್ಯ ಎಂದು ಡಿಕೆ ಶಿವಕುಮಾರ್ ಲೇವಡಿ ಮಾಡಿದರು.
ಜನಾರ್ದನ ರೆಡ್ಡಿ ಹಿಂತಿರುಗುವವರೆಗೂ ಬಳ್ಳಾರಿಯಲ್ಲಿ ಯಾವುದೇ ರಾಜಕೀಯ ಜಗಳ, ಘಟನೆಗಳು ಅಥವಾ ಎಫ್‌ಐಆರ್‌ಗಳು ನಡೆದಿಲ್ಲ ಎಂದು ಅವರು ಹೇಳಿದರು.
ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್ 2011 ರಲ್ಲಿ ಸಿಬಿಐ ಬಂಧಿಸಿದ ನಂತರ ಜನಾರ್ದನ ರೆಡ್ಡಿ ಬಳ್ಳಾರಿ, ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು. ಸುಪ್ರೀಂ ಕೋರ್ಟ್ ನಿಷೇಧವನ್ನು ತೆಗೆದುಹಾಕಿದ ನಂತರ 2024 ರಲ್ಲಿ ತಮ್ಮ ಹುಟ್ಟೂರು ಬಳ್ಳಾರಿಗೆ ರೆಡ್ಡಿ ಮರಳಿದ್ದರು.
Advertisement