

ಬೆಂಗಳೂರು: ಮಾಜಿ ಸಂಸದೆ ಸುಮಲತಾ ಅಂಬರೀಷ್ ಅವರು ರಾಜ್ಯ ರಾಜಕಾರಣಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪಕ್ಷದ ಹೈಕಮಾಂಡ್ ನಿರ್ದೇಶನ ಪ್ರಕಾರ ನಡೆದುಕೊಳ್ಳುತ್ತೇನೆ ಎಂದಿದ್ದಾರೆ.
ರಾಜ್ಯ ನಾಯಕರ ಜತೆ ಚರ್ಚೆ ನಡೆಸುವೆ
ಇಂದು ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ಮುಂದಿನ ರಾಜಕೀಯ ಭವಿಷ್ಯ ಕುರಿತು ಪಕ್ಷದ ಹೈಕಮಾಂಡ್ ಮತ್ತು ರಾಜ್ಯ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ಮುಂದಿನ ಚುನಾವಣೆಯ ವಿಚಾರದಲ್ಲಿ ಹೈಕಮಾಂಡ್ ಹಾಗೂ ಪಕ್ಷದ ನಾಯಕರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾನು ಬದ್ಧಳಾಗಿರುತ್ತೇನೆ. ನಾನೂ ಸಹ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಮತ್ತು ರಾಜ್ಯ ನಾಯಕರ ಜತೆ ಚರ್ಚೆ ನಡೆಸುವ ಉದ್ದೇಶವಿದೆ ಎಂದರು.
ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಕುರಿತು ವಿರೋಧವಿಲ್ಲ
ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಕುರಿತು ಯಾವುದೇ ವಿರೋಧವಿಲ್ಲ. ಸಮಯ, ಸಂದರ್ಭ ಎಲ್ಲವೂ ಕೂಡಿಬಂದಾಗ ಎಲ್ಲವೂ ಸಾಧ್ಯ. ಜಿಲ್ಲೆಯ ಮಟ್ಟದಲ್ಲಿ ಪಕ್ಷದಿಂದ ನಡೆಯುವ ಹೋರಾಟಗಳು, ಸಭೆಗಳು ಮತ್ತು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತಾ ಬಂದಿದ್ದೇನೆ. ಮಂಡ್ಯ ಜಿಲ್ಲೆಯಲ್ಲಿ ಪಕ್ಷವನ್ನು ಕೆಳಮಟ್ಟದಿಂದ ಗಟ್ಟಿಗೊಳಿಸಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಿದೆ ಎಂದು ಹೇಳಿದರು.
ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೂ ತಮ್ಮ ವಿರೋಧವಿಲ್ಲ, ಅಂತಿಮ ತೀರ್ಮಾನವನ್ನು ಹೈಕಮಾಂಡ್ ನಾಯಕರು ಕೈಗೊಳ್ಳಬೇಕು. ಜಿಲ್ಲೆಯಲ್ಲೀಗ ಬಿಜೆಪಿ ಮತಗಳಿಕೆ ಪ್ರಮಾಣವೂ ಹೆಚ್ಚಾಗಿದೆ. ಪಕ್ಷ ಸಂಘಟನೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಳ್ಳಾರಿಯಲ್ಲಿ ನಡೆದ ಇತ್ತೀಚಿನ ದುರ್ಘಟನೆ ಕುರಿತು ಮಾತನಾಡಿದ ಸುಮಲತಾ, ಬಳ್ಳಾರಿ ಘಟನೆ ಅತ್ಯಂತ ಬೇಸರ ತರಿಸಿದೆ. ಪಕ್ಷದ ಒಳಗಿನ ಕಲಹವಾಗಿರಲಿ ಅಥವಾ ಬೆಂಬಲಿಗರ ನಡುವಿನ ಸಂಘರ್ಷವಾಗಿರಲಿ, ಇಂತಹ ಘಟನೆಗಳು ಸಹಜವಾಗಿರಬಹುದು. ಆದರೆ ಆ ಕಚ್ಚಾಟದಲ್ಲಿ ಒಬ್ಬ ವ್ಯಕ್ತಿಯ ಪ್ರಾಣವೇ ಹೋಗಿರುವುದು ನೋವಿನ ಸಂಗತಿ. ಶತ್ರುತ್ವ ಈ ಮಟ್ಟಕ್ಕೆ ಹೋಗಬಾರದು ಎಂದು ಕಳವಳ ವ್ಯಕ್ತಪಡಿಸಿದರು.
Advertisement