

ಹಾವೇರಿ: ಸುದೀರ್ಘ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರ ದಾಖಲೆ ಮುರಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇಂದು ಹಾವೇರಿಯಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ನೂತನ ವಿವಿಐಪಿ ಸರ್ಕೀಟ್ ಹೌಸ್ ಕಟ್ಟಡ, ನೆಲೋಗಲ್ಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುವ ಸರ್ಕೀಟ್ ಹೌಸ್ ಕಟ್ಟಡದ ಶಿಲಾನ್ಯಾಸ ನೆರವೇರಿಸಿ, ಬಳಿಕ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಉದ್ಘಾಟನೆ ಜೊತೆಗೆ ಜಿಲ್ಲೆಯ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಜನರ ಆಶೀರ್ವಾದದಿಂದ ರಾಜಕೀಯದಲ್ಲಿ ಇಲ್ಲಿಯವರೆಗೆ ಬಂದಿದ್ದೇನೆ ಮತ್ತು ಇನ್ನೂ ಎಷ್ಟು ದಿನ ಸಕ್ರಿಯವಾಗಿರುತ್ತೇನೆಂದು ಗೊತ್ತಿಲ್ಲ ಎಂದಿದ್ದಾರೆ.
ಜನರ ಆಶೀರ್ವಾದ ಇರುವವರೆಗೂ ರಾಜಕೀಯದಲ್ಲಿಯೇ ಇರುತ್ತೇನೆ ಎಂದು ಪ್ರತಿಪಾದಿಸಿದ ಸಿಎಂ, ತಮ್ಮ ಆಡಳಿತದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು.
"ರಾಜಕೀಯದಲ್ಲಿರಲು ಜನರ ಆಶೀರ್ವಾದ ಬೇಕು. ನಾನು ಜನರ ಆಶೀರ್ವಾದದಿಂದಲೇ ಇಲ್ಲಿಯವರೆಗೆ ಬಂದಿದ್ದೇನೆ. ನಾನು ಎಷ್ಟು ದಿನ(ರಾಜಕೀಯದಲ್ಲಿ) ಇರುತ್ತೇನೆ ಎಂದು ನನಗೆ ಗೊತ್ತಿಲ್ಲ ಎಂದರು.
ಸಿದ್ದರಾಮಯ್ಯ ಅವರ ಸಾಧನೆ ಶೂನ್ಯ ಮತ್ತು ಅವರು ರಾಜ್ಯದ ಖಜಾನೆ ಖಾಲಿ ಮಾಡಿದ್ದಾರೆ ಎಂದು ಟೀಕಿಸಿದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ವಿರೋಧ ಪಕ್ಷದ ನಾಯಕರು ಸುಳ್ಳು ಹೇಳುವುದರಲ್ಲಿ ಪರಿಣಿತರು ಮತ್ತು ಅವರು ಅದನ್ನು ಮಾಡುತ್ತಲೇ ಇದ್ದಾರೆ ಎಂದು ತಿರುಗೇಟು ನೀಡಿದರು.
"SCP/TSP ಕಾಯ್ದೆಯನ್ನು ಯಾರು ಜಾರಿಗೆ ತಂದರು? ಅವರು(ಬಿಜೆಪಿ) ಅದನ್ನು ಮಾಡಿದ್ದಾರೆಯೇ? ಅವರು ಬಡ್ತಿಯಲ್ಲಿ ಮೀಸಲಾತಿ ನೀಡಿದ್ದಾರೆಯೇ? ಅನ್ನ ಭಾಗ್ಯ ಯೋಜನೆಯನ್ನು ಯಾರು ಜಾರಿ ತಂದರು? ನಾನು ಏನನ್ನೂ ಮಾಡಿಲ್ಲ ಎಂದು ಅವರು ಹೇಗೆ ಹೇಳುತ್ತಾರೆ? ನಾವು ಏನು ಮಾಡಿದ್ದೇವೆ ಎಂದು ಅವರು ಜನರನ್ನು ಕೇಳಬೇಕು" ಎಂದರು.
ಯಾವುದೇ ದಾಖಲೆಯನ್ನು ಮುರಿಯಲು ನಾನು ರಾಜಕೀಯ ಮಾಡುತ್ತಿಲ್ಲ. ಇದನ್ನೆಲ್ಲ ದಾಖಲೆಗಳ ದೃಷ್ಟಿಯಿಂದ ನಾನು ನೋಡುವುದಿಲ್ಲ, ಯಾರೂ ನೋಡಬಾರದು ಕೂಡಾ. ಇದು ಜನರ ಸೇವೆಗೆ ಸಿಕ್ಕಿರುವ ಅವಕಾಶದ ಭಾಗ್ಯ ಎಂದು ತಿಳಿದುಕೊಂಡಿದ್ದೇನೆ ಎಂದು ಹೇಳುತ್ತಾ, ಸಿಎಂ ಸಿದ್ದರಾಮಯ್ಯ ಅವರು ಮಂಗಳವಾರ ಐದು ವರ್ಷಗಳ ಪೂರ್ಣ ಅವಧಿಯನ್ನು ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು.
Advertisement