

ಹಾಸನ: ಜಾತ್ಯಾತೀತ ಜನತಾದಳ ಹಾಸನ ಜಿಲ್ಲಾ ಘಟಕದ ವತಿಯಿಂದ ಜ.24 ರಂದು ಹಾಸನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ತಿಳಿಸಿದರು.
ಹಾಸನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಮಾಜಿ ಸಚಿವ ಹಾಗೂ ಶಾಸಕ ಹೆಚ್. ಡಿ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಜ.24 ರಂದು ಮಧ್ಯಾಹ್ನ 1 ಗಂಟಗೆ ಸಮಾವೇಶ ಏರ್ಪಡಿಸಲಾಗಿದ್ದು ಜೆಡಿಎಸ್ ವರಿಷ್ಠರು ಹಾಗೂ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಹಾಗೂ ಕೇಂದ್ರದ ಉಕ್ಕು ಮತ್ತು ಭಾರಿ ಕೈಗಾರಿಕಾ ಸಚಿವರಾದ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಭೆಯಲ್ಲಿ 2 ಲಕ್ಷಕ್ಕೂ ಅಧಿಕ ಜನ ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ಪೂರ್ವ ಭಾವಿ ಸಭೆ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಜ.11 ರಂದು ಬೆಳಗ್ಗೆ 10.30 ಕ್ಕೆ ಬೇಲೂರು ತಾಲೂಕಿನಲ್ಲಿ, ಮಧ್ಯಾಹ್ನ 3 ಗಂಟೆಗೆ ಚನ್ನರಾಯಪಟ್ಟಣದಲ್ಲಿ, ಜ. 12 ರಂದು ಬೆಳಗ್ಗೆ 10 ಗಂಟೆಗೆ ಹೊಳೆನರಸೀಪುರದಲ್ಲಿ, ಮದ್ಯಾಹ್ನ 2 ಕ್ಕೆ ಸಕಲೇಶಪುರದಲ್ಲಿ, ಜ.13 ರಂದು ಬೆಳಗ್ಗೆ 10 ಕ್ಕೆ ಆಲೂರಿನಲ್ಲಿ. ಜ. 17ರಂದು ಬೆಳಗ್ಗೆ 10 ಕ್ಕೆ ಅರಕಲಗೂಡು, ಮಧ್ಯಾಹ್ನ 3 ಕ್ಕೆ ಅರಸೀಕೆರೆಯಲ್ಲಿ ಏರ್ಪಡಿಸಲಾಗಿದ್ದು, ಅಂತಿಮವಾಗಿ ಜ.19 ರಂದು ಬೆಳಗ್ಗೆ 10 ಗಂಟೆಗೆ ಹಾಸನದಲ್ಲಿ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದೆ ಎಂದರು.
ಸಮಾವೇಶದಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ವಿಶೇಷ ಗೌರವ ಸನ್ಮಾನ ಮಾಡಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.
Advertisement