

ಮಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣಾ ಬಾಂಡ್‌ಗಳು ಮತ್ತು ಪಿಎಂ ಕೇರ್ಸ್ ನಿಧಿಯ ಮೇಲಿನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಆರೋಪಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗುಂಡೂರಾವ್, ಚುನಾವಣಾ ಬಾಂಡ್ ಯೋಜನೆಯು ಸಾವಿರಾರು ಕೋಟಿ ರೂಪಾಯಿಗಳನ್ನು ಒಳಗೊಂಡಿದೆ. ಆದರೆ ಹಣವನ್ನು ಯಾರು ದಾನ ಮಾಡಿದರು ಅಥವಾ ಅದರಿಂದ ಯಾರು ಲಾಭ ಪಡೆದರು ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಜಾಹೀರಾತು ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್ ಅವರು, PM CARES ಅನ್ನು ಸರ್ಕಾರಿ ಟ್ರಸ್ಟ್ ಎಂದು ಘೋಷಿಸಿ, ದುಡ್ಡು ಯಾಕೆ ಸಂಗ್ರಹಿಸಿದರು? ಎಷ್ಟು ಹಣ ಸಂಗ್ರಹ ಆಗಿದೆ? ಎಷ್ಟು ಉಪಯೋಗ ಆಗಿದೆ? ಹಾಗೂ ಚುನಾವಣಾ ಬಾಂಡ್‌ನಲ್ಲಿ ಸಾವಿರಾರು ಕೋಟಿ ರೂ. ಲೂಟಿ ಮಾಡಲಾಗಿದೆ. ಮೊದಲು ಅವರು ಇದರ ಬಗ್ಗೆ ಉತ್ತರಿಸಲಿ ಎಂದು ಸವಾಲು ಹಾಕಿದರು.
"ನಿಜವಾದ ಸಮಸ್ಯೆ ಎಂದರೆ ಅಪಾರದರ್ಶಕ ವ್ಯವಸ್ಥೆಗಳ ಮೂಲಕ ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡುವುದು" ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.
ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಗುರಿಯಾಗಿಸಿಕೊಂಡಿದೆ ಎಂದು ಸಚಿವರು ಆರೋಪಿಸಿದ್ದಾರೆ.
Advertisement