

ಕಲಬುರಗಿ: ಕಲ್ಯಾಣ ಕರ್ನಾಟದ ಭಾಗಕ್ಕೆ ಹರಿದು ಬರುತ್ತಿರುವ ಅನುದಾನವನ್ನು ಉಲ್ಲೇಖಿಸಿ ನಾನು ಈ ಭಾಗದಲ್ಲಿ ಹುಟ್ಟಬೇಕಿತ್ತು ಎಂದು ಹೇಳಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ತೀಕ್ಷ್ಣವಾಗಿ ಟಾಂಗ್ ಕೊಟ್ಟಿದ್ದಾರೆ.
ಇಂದು ಕಲಬುರಗಿ ಜಿಲ್ಲೆ ಯಡ್ರಾಮಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಮಲ್ಲಿಕಾರ್ಜು ಖರ್ಗೆ, ಈ ಭಾಗದಲ್ಲಿ ಹುಟ್ಟಬೇಕಿತ್ತು ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಆದರೆ ನೀವು ಇಲ್ಲಿ ಹುಟ್ಟುವುದು ಬೇಡ. ನಾವು ಅಲ್ಲಿ ಹುಟ್ಟುವುದು ಬೇಡ. ನಿಮ್ಮ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ ಎಂದು ತಿರುಗೇಟು ನೀಡಿದರು.
371(ಜೆ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಹರಿದು ಬರುತ್ತಿದೆ. ಇದನ್ನು ನೋಡಿದರೆ ನಾನು ಇಲ್ಲಿಯೇ ಹುಟ್ಟಬೇಕಿತ್ತು. ನನ್ನ ಕ್ಷೇತ್ರ ಇಲ್ಲಿಯೇ ಇರಬೇಕಿತ್ತು ಎಂದು ಡಿಕೆ ಶಿವಕುಮಾರ್ ಹೇಳಿದ್ದರು.
ಬಳಿಕ ಮಾತನಾಡಿದ ಖರ್ಗೆ, ತಮ್ಮ ಭಾಷಣದಲ್ಲಿ ಡಿಕೆಶಿ ಹೇಳಿಕೆಯನ್ನು ಉಲ್ಲೇಖಿಸಿದರು. ಶಿವಕುಮಾರ್ ಅವರೇ ನೀವು ಇಲ್ಲಿ ಹುಟ್ಟುವುದು ಬೇಡ. ನಾವು ಅಲ್ಲಿ ಹುಟ್ಟುವುದು ಬೇಡ. ಮೈಸೂರು ಮತ್ತು ಕನಕಪುರ ಎಷ್ಟು ಅಭಿವೃದ್ಧಿ ಆಗಿವೆಯೋ ಅದರ ಶೇ. 75 ರಷ್ಟಾದರೂ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಲು ನೆರವು ನೀಡಿ. ಬೆಂಗಳೂರಿನ ರೀತಿ ಅಭಿವೃದ್ಧಿ ಮಾಡಿ ಸಾಕು. ಮುಖ್ಯಮಂತ್ರಿ ಹಾಗೂ ಡಿಸಿಎಂ ಈ ಭಾಗದ ಬಗ್ಗೆ ಗಮನ ಕೊಡಿ. ದೆಹಲಿಯಿಂದ ಬಂದು ನಾನು ಜನರಿಗೆ ಪ್ರಚೋದನೆ ಕೊಡ್ತಿಲ್ಲ. ಅದರ ಬದಲಾಗಿ ನಿಮ್ಮ ಭಾಗದಷ್ಟೇ ನಮ್ಮ ಭಾಗವನ್ನು ಅಭಿವೃದ್ಧಿ ಮಾಡಿ ಎಂದು ಹೇಳಿದರು.
VB-G RAM-G ಹಿಂಪಡೆಯುವಂತೆ ಕೇಂದ್ರ ಆಗ್ರಹ
ಜಿರಾಮ್‌ಜಿ ಹಿಂಪಡೆಯುವವರೆಗೆ ಕಾಂಗ್ರೆಸ್ ಹೋರಾಟ ನಿಲ್ಲಲ್ಲ, ಮನ್ರೇಗಾ ಮನಮೋಹನ್ ಸಿಂಗ್ ಜಾರಿಗೆ ತಂದ ಕಾನೂನು. ಇದು ಬಡವರ ಹೊಟ್ಟೆ ತುಂಬಿಸುವುದಕ್ಕೆ ತಂದ ಯೋಜನೆ. ಆದರೆ ಇವರು ಬಡವರಿಗೆ ಸಹಾಯ ಮಾಡುವ ಕಾನೂನಿಗೆ ಕೊಡಲಿ ಪೆಟ್ಟು ಹಾಕುತ್ತಿದ್ದಾರೆ ಎಂದು ಕೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಪಂಚಾಯಿತಿಯಲ್ಲಿ ನಡೆಯುವ ಕೆಲಸಗಳಿಗೆ ಅಡ್ಡಗಾಲು ಹಾಕುವ ಯೋಜನೆ ಮಾಡ್ತಿದ್ದಾರೆ. 60:40 ಶೇರ್ ಅಂತ ರಾಜ್ಯದ ಮೇಲೆ ಶೇ. 30ಕ್ಕಿಂತ ಹೆಚ್ಚಿನ ಭಾರವನ್ನು ಹಾಕ್ತಿದ್ದಾರೆ. ಮೋದಿ ಬಡವರಿಗೆ ಸಹಾಯ ಮಾಡುವ ಬದಲು ಕಾರ್ಪೊರೇಟ್ ಸಂಸ್ಥೆಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಮನ್ರೇಗಾದಲ್ಲಿ ಹಣ ಕಡಿತ ಮಾಡಲು ಮುಂದಾಗಿದ್ದಾರೆ. ನಾನು ಇದನ್ನು ಖಂಡಿಸುತ್ತೇನೆ ಎಂದರು.
Advertisement