

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗೆ ನಡೆಯುತ್ತಿರುವ ಹೋರಾಟದ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡುವ ರೀತಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಬುಧವಾರ ಸೋಷಿಯಲ್ ಮೀಡಿಯಾದಲ್ಲಿ ಮಾರ್ಮಿಕ ಪೋಸ್ಟ್ ಹಾಕಿದ್ದಾರೆ.
ತಮ್ಮ ಫೋಟೋದೊಂದಿಗೆ ಕನ್ನಡದಲ್ಲಿ ಪೋಸ್ಟ್ ಮಾಡಿರುವ ಶಿವಕುಮಾರ್, "ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ" ಎಂದು ಹೇಳಿದ್ದಾರೆ. ಈ ಮಾತನ್ನು ಡಿ ಕೆ ಶಿವಕುಮಾರ್ ಈ ಹಿಂದೆ ಕೂಡ ಸಾಕಷ್ಟು ಬಾರಿ ಹೇಳಿದ್ದರು.
ತಮಿಳು ನಾಡಿಗೆ ಕಾರ್ಯಕ್ರಮಕ್ಕೆ ಹೋಗುವ ಮಧ್ಯೆ ಮೈಸೂರಿಗೆ ಸಂಕ್ಷಿಪ್ತ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ ಮಾಡಿ ಪ್ರತ್ಯೇಕವಾಗಿ ಕೆಲ ಕ್ಷಣ ಮಾತುಕತೆ ನಡೆಸಿದ್ದರು. ಇಬ್ಬರೂ ನಾಯಕರ ಜೊತೆ ಕೆಲವು ನಿಮಿಷಗಳ ಕಾಲ ಪ್ರತ್ಯೇಕವಾಗಿ ರಾಹುಲ್ ಗಾಂಧಿ ಮಾತನಾಡಿದ್ದರೆ, ಒಟ್ಟಿಗೆ ಒಂದೆರಡು ನಿಮಿಷಗಳ ಕಾಲ ಭೇಟಿಯಾದರು.
ಮುಂಬರುವ ಬಜೆಟ್ ಸಿದ್ಧತೆ ಮತ್ತು ಸಚಿವ ಸಂಪುಟ ಪುನಾರಚನೆಯ ಅಗತ್ಯತೆಯ ಬಗ್ಗೆ ಸಿದ್ದರಾಮಯ್ಯ ಅವರ ಜೊತೆ ರಾಹುಲ್ ಗಾಂಧಿ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳುತ್ತಾರೆ. ಸರ್ಕಾರ ಎರಡೂವರೆ ವರ್ಷಗಳನ್ನು ಪೂರ್ಣಗೊಳಿಸಿ ಡಿ ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಭರವಸೆಯ ಬಗ್ಗೆ ಡಿ ಕೆ ಶಿವಕುಮಾರ್ ಮಾತನಾಡಬಹುತ್ತಿತ್ತು. ಆದರೆ ರಾಹುಲ್ ಗಾಂಧಿ ಅವರೊಂದಿಗೆ ಯಾವುದೇ ರಾಜಕೀಯ ವಿಷಯ ಚರ್ಚೆ ಆಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.
ಸಂಭಾವ್ಯ ನಾಯಕತ್ವ ಬದಲಾವಣೆಯ ಬಗ್ಗೆ ಕೇಳಿದಾಗ, ಅದು ಕೇವಲ ಮಾಧ್ಯಮಗಳ ಊಹಾಪೋಹ ಎಂದು ಸಿದ್ದರಾಮಯ್ಯ ಹೇಳಿದರು. ಪಕ್ಷದೊಳಗೆ ಅಂತಹ ಯಾವುದೇ ಸಮಸ್ಯೆ ಇಲ್ಲ, ಹೈಕಮಾಂಡ್ ಏನು ನಿರ್ಧರಿಸಿದರೂ ನಾನು ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.
ಖರ್ಗೆ ಹೇಳಿಕೆ ಊಹಾಪೋಹಗಳಿಗೆ ಪುಷ್ಠಿ
ಕರ್ನಾಟಕದಲ್ಲಿ ಆಡಳಿತ ಪಕ್ಷದೊಳಗೆ ನಡೆಯುತ್ತಿರುವ ಅಧಿಕಾರ ಜಗಳದ ನಡುವೆ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳನ್ನು ಮಾತುಕತೆಗಾಗಿ ದೆಹಲಿಗೆ ಯಾವಾಗ ಕರೆಯಲಾಗುವುದು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ, ಅಗತ್ಯವಿದ್ದಾಗಲೆಲ್ಲಾ ಪಕ್ಷವು ಅವರನ್ನು ಕರೆಯುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ನವೆಂಬರ್ 20, 2025 ರಂದು ರಾಜ್ಯ ಸರ್ಕಾರವು ತನ್ನ ಐದು ವರ್ಷಗಳ ಅವಧಿಯ ಅರ್ಧವನ್ನು ಪೂರ್ಣಗೊಳಿಸಿದ ನಂತರ ಮುಖ್ಯಮಂತ್ರಿ ಬದಲಾವಣೆಯ ಸಾಧ್ಯತೆಯ ಊಹಾಪೋಹಗಳ ನಡುವೆ ನಾಯಕತ್ವ ಬದಲಾವಣೆಯ ಸಮಸ್ಯೆಗೆ ಪರಿಹಾರ ಹೈಕಮಾಂಡ್ ಮಟ್ಟದಲ್ಲಿದೆ.
Advertisement