

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು, ಚೀನಾದ ಆಡಳಿತರೂಢ ಕಮ್ಯುನಿಸ್ಟ್ ಪಕ್ಷದೊಂದಿಗೆ ನೋಂದಾಯಿಸದ ಆರ್‌ಎಸ್‌ಎಸ್‌ಗೆ ಏನು ಕೆಲಸ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ,‘ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ ಪ್ರತಿನಿಧಿಗಳನ್ನು ಬಿಜೆಪಿಯ ಪೋಷಕ ಸಂಸ್ಥೆಯಾದ ಮತ್ತು ನೋಂದಾಯಿಸದ ಆರ್‌ಎಸ್‌ಎಸ್ ಮುಖಂಡರ ಭೇಟಿ ಯಾವ ಉದ್ದೇಶಕ್ಕಾಗಿ’ ಎಂದು ಪ್ರಶ್ನಿಸಿದ್ದಾರೆ.
ಚೀನಾದ ಆಡಳಿತ ಪಕ್ಷದೊಂದಿಗೆ ಒಂದು ಎನ್‌ಜಿಒಗೆ ಏನು ಕೆಲಸ? ಈ ಘಟನೆಯಿಂದ ಕೇಂದ್ರ ಸರ್ಕಾರವನ್ನು ನಿಜವಾಗಿಯೂ ಯಾರು ಮುನ್ನಡೆಸುತ್ತಿದ್ದಾರೆ ಎಂಬುದು ಈಗ ಸ್ಪಷ್ಟವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಆರೆಸ್ಸೆಸ್ ಹಿಂದೆಯೂ ರಾಜಕಾರಣದಲ್ಲಿತ್ತು. ಈಗಲೂ ಇದೆ, ಮುಂದೆಯೂ ಇರಲಿದೆ. ಪ್ರಧಾನಿ ಮೋದಿ ಅವರ ಕೆಂಗಣ್ಣಿನಿಂದ ಕೆಂಪು ಹಾಸು ನೀತಿ ಬಯಲಾಗಿದೆ. ಅದರಲ್ಲೂ ವಾಸ್ತವಿಕ ನಿಯಂತ್ರಣ ರೇಖೆಯ ವಿಷಯದಲ್ಲಿ ಬೀಜಿಂಗ್‌ನ ನಿರಂತರ ಹಸ್ತಕ್ಷೇಪವನ್ನು ಸಹಿಸಿಕೊಳ್ಳುತ್ತಿರುವ ಕೇಂದ್ರದ ನಿಲುವನ್ನು ಗಮನಿಸಿದರೆ, ಇವರು ವಿದೇಶಾಂಗ ನೀತಿಯ ಹೆಸರಲ್ಲಿ ಸರ್ಕಸ್ ನಡೆಸುತ್ತಿದ್ದಾರೆ’ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಚೀನಾದ ಆಡಳಿತ ಪಕ್ಷವಾದ ಚೀನಾ ಕಮ್ಯುನಿಸ್ಟ್ ಪಕ್ಷ(ಸಿಪಿಸಿ) ಭಾರತದ ಆಡಳಿತ ಪಕ್ಷ ಬಿಜೆಪಿಯ ಪ್ರಧಾನ ಕಚೇರಿಗೆ ಮತ್ತು ನಂತರ ನೋಂದಣಿಯಾಗದ ಅದರ ಸೈದ್ಧಾಂತಿಕ ಮತ್ತು ಸಾಂಸ್ಥಿಕ ಪೋಷಕ ಆರ್‌ಎಸ್‌ಎಸ್‌ನ ದೆಹಲಿಯ ಪ್ರಧಾನ ಕಚೇರಿಗೆ ಭೇಟಿ ನೀಡಿ, ಆರ್ ಎಸ್ಎಸ್ ಸರ್ಕಾರಿವಾಹ ದತ್ತಾತ್ರೇಯ ಹೊಸಬಾಳೆ ಅವರೊಂದಿಗೆ ಮಾತುಕತೆ ನಡೆಸಿತ್ತು.
Advertisement